ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾವು 150 ಸ್ಥಾನಗಳನ್ನು ಗೆಲ್ಲಬೇಕು ಎಂದು ಗುರಿ ಇಟ್ಟುಕೊಂಡಿದ್ದೇವೆ. 130ಕ್ಕೂ ಅಧಿಕ ಸ್ಥಾನ ಗೆಲ್ಲುವುದು ಖಚಿತ ಎಂದು ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೆಹಲಿ ಪ್ರವಾಸದಲ್ಲಿರುವ ಅವರು ಇಂದು ಮಾಧ್ಯಮಗೋಷ್ಟಿ ನಡೆಸಿ, ಇದೇ ವಿಚಾರವನ್ನು ಟ್ವೀಟ್ ಕೂಡ ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು ಕಾಂಗ್ರೆಸ್ ಸಮೀಕ್ಷೆಯನ್ನು ತಳ್ಳಿ ಹಾಕಿದ್ದಾರೆ. ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಜನರ ಅಭಿಪ್ರಾಯ ಬೇರೆಯದ್ದೇ ಇದೆ ಎಂದರು.
ಮಾದರಿ ಸಮೀಕ್ಷೆ ಎಂದರೆ ಜನರ ಅಭಿಪ್ರಾಯವನ್ನು ಖುದ್ದಾಗಿ ಸಂಗ್ರಹಿಸಲಾಗುತ್ತದೆ. ಮುಖ್ಯಮಂತ್ರಿಗಳು ಜನರ ಅಭಿಪ್ರಾಯ ಒಪ್ಪಿಕೊಳ್ಳಲ್ಲ ಎಂದಾಯಿತು. ಅದೇನೇ ಇದ್ದರೂ ನಾವು ಸ್ಪಷ್ಟ ಬಹುಮತದ ಮೂಲಕ ಗೆಲ್ಲುವುದನ್ನು ಯಾರಿಂದಲೂ ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮರಣದಂಡನೆ ವಿಧಿಸಿ: ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಅವರ ಕೊಲೆ ಮಾಡಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಹಂತಕರಿಗೆ ಮರಣದಂಡನೆ ಶಿಕ್ಷೆಯಾಗಬೇಕು. ಕಾನೂನು ಕೈಗೆತ್ತಿಕೊಳ್ಳುವುದು, ತಲೆ ಕತ್ತರಿಸುವುದನ್ನು ಮಾಡುವ ಜನರಿಗೆ ಮರಣ ದಂಡನೆ ವಿಧಿಸುವ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಓದಿ: ಆಂಧ್ರಪ್ರದೇಶ ಕಾಂಗ್ರೆಸ್ ಉಸ್ತುವಾರಿಯಾಗಿ ಕನ್ನಡಿಗ ರಕ್ಷಾ ರಾಮಯ್ಯ ಆಯ್ಕೆ