ಬೆಂಗಳೂರು: ರಾಜ್ಯದ ನೆರೆ ಪರಿಸ್ಥಿತಿ ಕುರಿತು ಪ್ರಧಾನಿ ಬಳಿ ಗಟ್ಟಿಯಾಗಿ ಮಾತನಾಡದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಯಡಿಯೂರಪ್ಪನವರೇ, ನಿಮಗೆ ಹಾಗೂ 25 ಬಿಜೆಪಿಯ ಸಂಸದರಿಗೆ ಪ್ರಧಾನಮಂತ್ರಿಗಳ ಜೊತೆ ರಾಜ್ಯದ ನೆರೆ ಪರಿಸ್ಥಿತಿಯ ಕುರಿತು ಗಟ್ಟಿಯಾಗಿ ಮಾತನಾಡುವ ಧೈರ್ಯ ಇಲ್ಲ ಎಂದಾದರೆ ನಾವೂ ನಿಮ್ಮ ಜೊತೆ ದೆಹಲಿಗೆ ಬರುತ್ತೇವೆ. ಸರ್ವಪಕ್ಷ ನಿಯೋಗದ ಜೊತೆ ಪ್ರಧಾನಿಗಳನ್ನು ಭೇಟಿ ಮಾಡೋಣ ಎಂದು ಹೇಳಿ ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿರುವುದು ತುಘಲಕ್ ಸರ್ಕಾರ ಮಾತ್ರ ಅಂತಾ ಅಂದುಕೊಂಡಿದ್ದೆ. ಆದರೆ, ಈ ಸರ್ಕಾರಕ್ಕೆ ಕಣ್ಣು, ಕಿವಿ ಯಾವುದೂ ಇಲ್ಲ. ನೆರೆ ಬಂದು ಒಂದೂವರೆ ತಿಂಗಳಾದರೂ ನಿರಾಶ್ರಿತರಿಗೆ ಸೂಕ್ತ ವಸತಿ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ ಎಂದು ಇನ್ನೊಂದು ಟ್ವೀಟ್ನಲ್ಲಿ ಟೀಕಿಸಿದ್ದಾರೆ.
ಹಣದ ಆಸೆಗಾಗಿ ಮೈತ್ರಿ ಸರ್ಕಾರವನ್ನು ಬೀಳಿಸಿದ ಅತೃಪ್ತ ಶಾಸಕರು ಬಿಜೆಪಿಯ ಕಣ್ಣಿಗೆ ದೇವರಂತೆ ಕಂಡಿದ್ದರು. ಈಗ ಅದೇ ಅತೃಪ್ತರನ್ನು ಎರಡೇ ತಿಂಗಳನಲ್ಲಿ ಬಿಜೆಪಿಯ ಉಪಮುಖ್ಯಮಂತ್ರಿಗಳು "ದರಿದ್ರ ಮಕ್ಕಳು" ಎಂದು ಕರೆಯುತ್ತ ತಿರುಗಾಡುತ್ತಿದ್ದಾರೆ. ಅತೃಪ್ತರು ಗ್ಯಾಂಗ್ರೀನ್ ಇದ್ದ ಹಾಗೆ, ಬಿಜೆಪಿಗೂ ಇದೀಗ ಅದರ ಅರಿವಾದಂತಿದೆ ಎಂದು ಜೆಡಿಎಸ್ ಟ್ವೀಟ್ ಮಾಡಿದ್ದು, ಪರೋಕ್ಷವಾಗಿ ಡಿಸಿಎಂ ಲಕ್ಷ್ಮಣ ಸವದಿಯನ್ನು ಟೀಕಿಸಿದೆ.