ಬೆಂಗಳೂರು: ಮುಂಗಾರು ಮಳೆಯಿಂದ ತತ್ತರಿಸಿರುವ ರೈತರಿಗೆ ಬೆಳೆಹಾನಿ ಪರಿಹಾರ ನೀಡುವಾಗ ರಾಷ್ಟ್ರೀಯ ಮತ್ತು ರಾಜ್ಯ ಪ್ರಕೃತಿ ವಿಕೋಪ ನಿಧಿಯ ಮಾರ್ಗಸೂಚಿಗಳಿಗೆ ಜೋತುಬೀಳದೆ ಸರ್ಕಾರ ರೈತರಿಗೆ ತಕ್ಷಣವೇ ಹೆಚ್ಚಿನ ಪರಿಹಾರ ನೀಡಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮೂಲಕ ಸರ್ಕಾರವನ್ನು ಒತ್ತಾಯಿಸಿರುವ ಅವರು, ಸತತ ಮೂರನೇ ವರ್ಷ ಅತಿವೃಷ್ಟಿಗೆ ಸಿಲುಕಿರುವ ರಾಜ್ಯದ ರೈತರು, ಈ ಬಾರಿಯೂ ಮಳೆಯ ಅನಾಹುತ ತಡೆದುಕೊಳ್ಳುವ ಶಕ್ತಿಯಿಲ್ಲದೆ ಬಸವಳಿದಿದ್ದಾರೆ. ರಸ್ತೆ, ವಿದ್ಯುತ್ ಸಂಪರ್ಕ ಕಡಿತ ಹಾಗೂ ಮೂಲಭೂತ ಸೌಕರ್ಯಗಳ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಸಮರೋಪಾದಿಯಲ್ಲಿ ಇದನ್ನು ಸರಿಪಡಿಸಲು ತುರ್ತು ಗಮನ ಹರಿಸಬೇಕು.
ಎರಡು ಬಾರಿ ಹೃದಯ ಚಿಕಿತ್ಸೆಗೆ ಒಳಗಾಗಿರುವ ನಾನು, ಕೊರೊನಾ ಸಂಕಷ್ಟ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ರಾಜ್ಯಾದ್ಯಂತ ಖುದ್ದು ಪರಿಶೀಲನೆ ಮಾಡುವುದು ವೈದ್ಯರ ಸಲಹೆ ಮೇರೆಗೆ ಬಲುಕಷ್ಟ. ಆದರೆ, ಅತಿವೃಷ್ಟಿಯ ನಷ್ಟದ ಬಗ್ಗೆ ಜಿಲ್ಲಾವಾರು ಮಾಹಿತಿ ಪಡೆದು ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿಗಳು ಸೇರಿದಂತೆ ಸರ್ಕಾರಕ್ಕೆ ಮಾಹಿತಿ ಒದಗಿಸುತ್ತೇನೆ. ನೆರೆ ಸಂತ್ರಸ್ತರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣವೇ ಉದಾರ ನೆರವು ನೀಡಬೇಕು. ಸಂತ್ರಸ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆತ್ಮವಿಶ್ವಾಸ ಮೂಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಚಿವರು ಮತ್ತು ಅಧಿಕಾರಿಗಳು ಕಾಟಾಚಾರಕ್ಕೆ ಸ್ಥಳ ಪರಿಶೀಲನೆ ಮಾಡಿದರೆ ಉಪಯೋಗವಾಗದು. ನೆರೆ ಸಂತ್ರಸ್ತರ ನೆರವಿಗೆ ಜಿಲ್ಲಾಧಿಕಾರಿಗಳಿಗೆ 5 ಕೋಟಿ ರೂ. ಒದಗಿಸಿರುವುದು ಏನೇನೂ ಸಾಲದು. ಅತಿವೃಷ್ಟಿಯನ್ನು ಸರ್ಕಾರ ಸವಾಲಾಗಿ ಸ್ವೀಕರಿಸಿ, ಸಂತ್ರಸ್ತರಿಗೆ ತುರ್ತು ಪರಿಹಾರ ನೀಡುವುದನ್ನೇ ಮೂಲಮಂತ್ರವಾಗಿಸಿಕೊಳ್ಳಬೇಕು. ನೆರೆಹಾವಳಿಯಿಂದ ಕಳೆದ ವರ್ಷ ನಿರ್ವಸತಿಕರಾದವರಿಗೆ 5,00,000 ರೂಪಾಯಿ ಪರಿಹಾರ ಒದಗಿಸುವ ಹಾಗೂ ಮನೆ ಕಟ್ಟಿಸಿಕೊಡುವ ಸರ್ಕಾರದ ಭರವಸೆ ಬಹುಸಂಖ್ಯಾತರಿಗೆ ಅನುಕೂಲವಾಗಲಿಲ್ಲ. ಈ ವರ್ಷವೂ ಮಳೆಯಿಂದ ನಿರಾಶ್ರಿತರಾದವರಿಗೆ ತಕ್ಷಣವೇ ಸೂರು ಒದಗಿಸುವ ಶಾಶ್ವತ ಯೋಜನೆಯನ್ನು ಸರ್ಕಾರ ಆದ್ಯತೆಯ ಮೇಲೆ ಅನುಷ್ಠಾನ ಮಾಡಬೇಕು. ಸತ್ಯವನ್ನು ಬಹಳ ಕಾಲ ಮರೆಮಾಚಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.