ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್ಆರ್ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಬಿ) ಜೆಡಿಎಸ್ ಸ್ಪಷ್ಟವಾಗಿ ವಿರೋಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಜೆಪಿ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಆರ್ಟಿಕಲ್ 370 ರದ್ದು, ಎನ್ಆರ್ಸಿ, ಸಿಎಬಿ ಕಾಯ್ದೆ ರಚಿಸಿದೆ. ಇದರ ವಿರುದ್ಧ ದೇಶದ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಹೋರಾಟ ಆರಂಭಿಸಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಆರಂಭಗೊಂಡ ಪ್ರತಿಭಟನೆ ಕಾವು ದೇಶದ ಹಲವೆಡೆ ವಿಸ್ತರಿಸಿದೆ ಎಂದು ಹೇಳಿದರು.
ಈ ಕಾಯ್ದೆ ಜಾರಿಯಿಂದ ದೇಶದ ಸಮಸ್ಯೆ ಬಗೆಹರಿಸುವಂತೆ ಕಾಣುತ್ತಿಲ್ಲ. ಸಮಸ್ಯೆ ಹುಟ್ಟು ಹಾಕುವಂತೆ ಕಾಣುತ್ತಿದೆ. ಅಲ್ಲದೆ, ಸಂವಿಧಾನದ ಆಶಯವನ್ನೇ ಬುಡಮೇಲು ಮಾಡಲು ಹೊರಟಿದೆ. ಬಿಜೆಪಿ ನಾಯಕರು ಹಿಂದೂಗಳ ರಕ್ಷಣೆಗೆ ಈ ಕಾಯ್ದೆ ಎಂದುಕೊಂಡಿದ್ದಾರೆ. ಈ ಕಾಯ್ದೆಯಿಂದಾಗಿ ಮುಸ್ಲಿಂ ಸಮುದಾಯದಲ್ಲಿ ಭಯದ ವಾತಾವಣರಣ ಸೃಷ್ಟಿಯಾಗಿದೆ. ಕಾಯ್ದೆಯಲ್ಲಿರುವ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದೇಶದಲ್ಲಿ ಅಶಾಂತಿ, ಅಪನಂಬಿಕೆ ವಾತಾವರಣ ಸೃಷ್ಟಿಯಾಗುತ್ತಿದೆ. ಅಸ್ಸಾಂ, ತ್ರಿಪುರಾ ಸಮಸ್ಯೆಗಳೇ ಬೇರೆ, ಬೇರೆ. ವಲಸಿಗರು ಕೇವಲ ಭಾರತಕ್ಕೆ ಸೀಮಿತವಲ್ಲ, ವಿಶ್ವದೆಲ್ಲೆಡೆ ಈ ಸಮಸ್ಯೆ ಇದೆ. ದೇಶದ ಪ್ರತಿಯೊಬ್ಭ ನಾಗರಿಕನಿಗೆ ರಕ್ಷಣೆ ನೀಡುವ ಜವಾಬ್ದಾರಿ ಸರ್ಕಾರದ್ದಾಗಿದೆ. ಹಾಗಾಗಿ ನಮ್ಮ ಪಕ್ಷದ ನಿಲುವು ಕಾಯ್ದೆ ವಿರುದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ವಿದೇಶಗಳ ಜೊತೆ ಬಾಂದವ್ಯ ಬೆಸೆಯಲು ಹೆಚ್ಚು ಸಮಯ ಕಳೆಯುವ ಮೋದಿ, ನೆರೆಯ ದೇಶಗಳಾದ ಆಫ್ಘಾನಿಸ್ತಾನ, ಭೂತಾನ್, ಚೀನಾ ವಿಚಾರದಲ್ಲಿ ತೆಗೆದುಕೊಳ್ಳುತ್ತಿರುವ ನಿಲುವುಗಳೇ ಬೇರೆ ಇದೆ. ಇದರಿಂದಾಗಿ ಸಮಾಜಕ್ಕೆ ಏನು ಸಂದೇಶ ಕೊಡಲಿದ್ದೀರಿ? ಆರ್ಥಿಕ ಪರಿಸ್ಥಿತಿ ಸರಿಪಡಿಸುವ ಬದಲು ವಿವಾದಗಳ ವಿಷಯದಲ್ಲಿ ಮೋದಿ ಸರ್ಕಾರ ನಿರತವಾಗಿದೆ. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ದೇಶಕ್ಕೆ ಸರಿಯಾದ ರೀತಿಯಲ್ಲಿ ಬಿಜೆಪಿ ಸರ್ಕಾರ ಕೆಲಸ ಮಾಡಬೇಕಿತ್ತು ಎಂದರು.