ಬೆಂಗಳೂರು: ನೂತನ ಶಿಕ್ಷಣ ನೀತಿ ಶೈಕ್ಷಣಿಕ ವಲಯದಲ್ಲಿ ಹೊಸ ದಿಕ್ಕನ್ನು ಕಲ್ಪಿಸಲಿದೆ ಎನ್ನುವ ಆಶಾಭಾವ ಮೂಡಿಸಿದೆ. ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ ಎಲ್ಲಾ ರೀತಿಯಲ್ಲಿ ಕ್ರಮ ವಹಿಸಿರುವ ರಾಜ್ಯ ಸರ್ಕಾರ, ನೂತನ ಶಿಕ್ಷಣ ನೀತಿ ಕಾರ್ಯರೂಪಕ್ಕೆ ತರಲು ಕಮಿಟಿ ರಚನೆ ಮಾಡಿದೆ. ಈಗಾಗಲೇ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯ, ಕಾಲೇಜುಗಳ ನ್ಯಾಕ್ ಮಾನ್ಯತೆ, ಎನ್ಐಆರ್ಎಫ್ ಶ್ರೇಯಾಂಕ ಪಡೆಯುವ ಸಂಬಂಧ ಕ್ರಿಯಾ ಯೋಜನೆ ಸಲ್ಲಿಸುವಂತೆ ಎಲ್ಲಾ ಕುಲಪತಿಗಳಿಗೆ ಸೂಚನೆ ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್.ಅಶ್ವತ್ಥ ನಾರಾಯಣ, ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿ ಘೋಷಣೆಯಾಗಿದ್ದು, ಈ ವರ್ಷದಿಂದ ಅನುಷ್ಠಾನ ಮಾಡಲಾಗುವುದು. ಅದಕ್ಕೆ ಬೇಕಾದ ಎಲ್ಲಾ ತಯಾರಿ ಮಾಡುತ್ತಿದ್ದು, ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಭಾರತ ಸರ್ಕಾರವೂ ಈ ದಿಕ್ಕಿನಲ್ಲಿ ಅನುಷ್ಠಾನ ತಂಡ, ರಿವ್ಯೂ ಟೀಂ ಮಾಡಿದ್ದು, ರಾಜ್ಯದಲ್ಲೂ ಅನುಷ್ಠಾನ ಮಾಡಲಿಕ್ಕೆ ಉನ್ನತ ಶಿಕ್ಷಣ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಇಲಾಖೆಯಲ್ಲಿ ಸಹ ಕಮಿಟಿ ಮಾಡಿ ಕಾರ್ಯರೂಪಕ್ಕೆ ತರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 2020-21ರಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಮಾಡಲಿಕ್ಕೆ ಎಲ್ಲಾ ಕ್ರಮ ವಹಿಸಿ, ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.