ಬೆಂಗಳೂರು : ವಿದೇಶಿ ಪ್ರಜೆಗಳಿಗಬ್ಬರ ಕಿತ್ತಾಟ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಳ್ಳಪ್ಪ ಸರ್ಕಲ್ ಬಳಿ ನಡೆದಿದೆ.
35 ವರ್ಷದ ಆಫ್ರಿಕನ್ ಪ್ರಜೆ ವಿಕ್ಟರ್ ಹತ್ಯೆಯಾದ ವ್ಯಕ್ತಿ. ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಕರಣ ವಿವರ : ಭಾನುವಾರ ರಾತ್ರಿ 10 ಗಂಟೆ ವೇಳೆಗೆ ವಿಕ್ಟರ್ ಮತ್ತು ಆತನ ಸ್ನೇಹಿತ ಕಮ್ಮನಹಳ್ಳಿಯ ಕುಳ್ಳಪ್ಪ ಸರ್ಕಲ್ ಬಳಿ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ವಿಕ್ಟರ್ನನ್ನು ಆರೋಪಿ ಸ್ನೇಹಿತ ಚಾಕುವಿನಿಂದ ಹೊಟ್ಟೆ ಹಾಗೂ ಎದೆ ಭಾಗಕ್ಕೆ ತಿವಿದು ಪರಾರಿಯಾಗಿದ್ದ. ರಕ್ತಸ್ರಾವದಿಂದ ಕುಸಿದುಬಿದ್ದಿದ್ದ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಇಬ್ಬರು ವಿದೇಶಿ ಪ್ರಜೆಗಳು ಎಷ್ಟು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದರು. ಕೊಲೆಗೆ ನಿಖರ ಕಾರಣ ಏನು..? ಎಂಬುದರ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.