ಬೆಂಗಳೂರು: ಖಾಸಗಿ ಶಾಲೆಗಳ ಸಮಸ್ಯೆಗಳ ಪರಿಹಾರಕ್ಕಾಗಿ ಎಫ್‍ಕೆಸಿಸಿಐ ನಿಯೋಗ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷರಾದ ಪೆರಿಕಲ್ ಎಂ. ಸುಂದರ್ ಮತ್ತು ಮಾಜಿ ಅಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಖಾಸಗಿ ಶಾಲೆಗಳ ಸಮಸ್ಯೆಗಳನ್ನು ವಿವರಿಸಿದರು.
ಸಭೆಯಲ್ಲಿ ಸಿ.ಬಿ.ಎಸ್.ಇ ,ಐ.ಸಿಎಸ್.ಇ, ಸ್ಟೇಟ್ ಬೋರ್ಡ್ ಆಡಳಿತ ಮಂಡಳಿಗಳ ಒಕ್ಕೂಟ ಮತ್ತು ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಬೆಂಗಳೂರುಗಳಿಂದ ಬಂದಿದ್ದ ಸುಮಾರು 30 ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಗಳ ಸದಸ್ಯರು ಭಾಗವಹಿಸಿದ್ದರು. ಕಳೆದ ಎಂಟು ತಿಂಗಳುಗಳಿಂದ ಮಹಾಮಾರಿ ಕೋವಿಡ್‍ನಿಂದಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಖಾಸಗಿ ಶಾಲೆಗಳ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರ ಯಾವುದೇ ಶಾಲೆಗಳು ಶುಲ್ಕವನ್ನು ತೆಗೆದುಕೊಳ್ಳಬಾರದೆಂದು ಆದೇಶ ಹೊರಡಿಸಿತು. ಇದರಿಂದಾಗಿ ಖಾಸಗಿ ಶಾಲೆಗಳು ಖರ್ಚು ವೆಚ್ಚಗಳನ್ನು ಭರಿಸಲಾಗದೆ ಪರದಾಡುತ್ತಿವೆ.
ಸಿಬ್ಬಂದಿ ವೇತನ, ಕಟ್ಟಡದ ಬಾಡಿಗೆ, ಸಾಲದ ಕಂತುಗಳ ಮರು ಪಾವತಿ, ಆಸ್ತಿ ತೆರಿಗೆ, ಶಾಸನ ಬದ್ಧವಾಗಿ ಪಾವತಿಸಬೇಕಾಗಿರುವ ಇಎಸ್ಐ, ಭವಿಷ್ಯ ನಿಧಿ, ಅದಲ್ಲದೇ ನೀರಿನ ಮತ್ತು ವಿದ್ಯುತ್ ಬಿಲ್‍ನ್ನು ಪಾವತಿಸಲಾಗದ ಶೋಚನೀಯ ಪರಿಸ್ಥಿತಿಯಲ್ಲಿವೆ ಎಂದು ವಿವರಿಸಿದರು.
ಇದನ್ನೂ ಓದಿ: ಜನವರಿಯಿಂದ ಆಲ್ ಇಂಡಿಯಾ ಬಾರ್ ಪರೀಕ್ಷೆ ಆರಂಭ: ವಕೀಲರ ಪರಿಷತ್ತು ಘೋಷಣೆ
ಖಾಸಗಿ ಶಾಲೆಗಳು ಆನ್ಲೈನ್ ತರಗತಿಗಳನ್ನು ನಡೆಸಲು ಪ್ರತ್ಯೇಕ ಸ್ಟುಡಿಯೋ ನಿರ್ಮಿಸಿ ಅದರ ಜೊತೆಗೆ ನುರಿತ ಶಿಕ್ಷಕರನ್ನು ಮತ್ತು ತಂತ್ರಜ್ಞರನ್ನು ನೇಮಿಸಿ ಹೆಚ್ಚಿನ ವೆಚ್ಚವನ್ನು ಭರಿಸಬೇಕಾದ ಕಾರಣ ಈ ಎಲ್ಲಾ ಸಂಗತಿಗಳನ್ನು ಗಮನದಲ್ಲಿಟ್ಟು ಸಂಪೂರ್ಣ ವಾರ್ಷಿಕ ಶುಲ್ಕವನ್ನು ನಿಗದಿಪಡಿಸಿ ಪಾವತಿಸುವಂತೆ ಆದೇಶ ನೀಡಬೇಕೆಂದು ಮಂತ್ರಿಗಳಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಸಚಿವ ಸುರೇಶ್ ಕುಮಾರ್ ಮಾತನಾಡಿ, ಎಫ್‍ಕೆಸಿಸಿಐ ಅಧ್ಯಕ್ಷರ ಮಾತಿಗೆ ಮನ್ನಣೆ ನೀಡಿ, ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಸದಸ್ಯರ ದುಂಡು ಮೇಜಿನ ಸಭೆಯನ್ನು ಎಫ್‍ಕೆಸಿಸಿಐಯು ಆಯೋಜಿಸಿದರೆ ಪರಸ್ಪರ ಚರ್ಚೆಗಳ ಮುಖಾಂತರ ಸರ್ಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕೋವಿಡ್‍ನಿಂದಾಗಿ ಬಂದೊದಗಿರುವ ಸಮಸ್ಯೆಗಳನ್ನು ಬಗೆಹರಿಸಲು ಬದ್ಧವಾಗಿದೆ ಎಂದರು.