ಬೆಂಗಳೂರು: ಮೇ 5ರಂದು ಪ್ರಥಮ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ನಿರ್ದೇಶನದಂತೆ ಮುಂದಿನ ತರಗತಿಗಳ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುವಾಗುವಂತೆ ಮೇ 5ರಂದು ಪ್ರಥಮ ಪಿಯುಸಿ ಫಲಿತಾಂಶವನ್ನು ಪ್ರಕಟಿಸುವುದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು ಸುತ್ತೋಲೆ ಹೊರಡಿಸಿದೆ.
ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ಕಾಲೇಜು ಮಟ್ಟದಲ್ಲಿಯೇ ನಿರ್ವಹಿಸಲು ಮಾನದಂಡಗಳನ್ನು ಮುಂದೆ ತಿಳಿಸಲಾಗುವುದು ಎಂದೂ ಸಹ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಖಾಸಗಿ ಕಾಲೇಜುಗಳು ಈ ಸಾಲಿನಲ್ಲಿ ಶುಲ್ಕ ಹೆಚ್ಚಿಸುವ ಹಾಗಿಲ್ಲ:
ಖಾಸಗಿ ಪಿಯು ಕಾಲೇಜುಗಳು ಅಸಹಾಯಕ ಪೋಷಕರ ಮೇಲೆ ವಿದ್ಯಾರ್ಥಿಗಳ ಶುಲ್ಕ ಪಾವತಿಗೆ ಒತ್ತಾಯ ಹೇರಬಾರದು. ಶುಲ್ಕ ಪಾವತಿಗೆ ಇಚ್ಛಿಸುವ ಪೋಷಕರಿಂದ ಕಂತುಗಳ ಮೂಲಕ ಶುಲ್ಕ ಸ್ವೀಕರಿಸತಕ್ಕದ್ದು ಹಾಗೂ 2020-21ನೇ ಸಾಲಿಗೆ ಯಾವುದೇ ಕಾರಣಕ್ಕೂ ಬೋಧನಾ ಶುಲ್ಕವನ್ನು ಹೆಚ್ಚಿಸಬಾರದೆಂದು ಇಲಾಖೆಯು ನಿರ್ದೇಶನ ನೀಡಿದೆ. ಒಂದು ವೇಳೆ ಈ ಬಗ್ಗೆ ದೂರುಗಳು ಬಂದಲ್ಲಿ, ಆಯಾ ಕಾಲೇಜುಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.