ಬೆಂಗಳೂರು: ಸಾರಿಗೆ ಸಂಸ್ಥೆ ನೌಕರರನ್ನು ಪ್ರಚೋದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ, ಕಾನೂನುಬಾಹಿರವಾಗಿ ಮುಷ್ಕರ ನಡೆಸಿ ಸಂಸ್ಥೆಗೆ ನಷ್ಟ ಉಂಟು ಮಾಡಿದ ಆರೋಪದಡಿ ಕೋಡಿಹಳ್ಳಿ ಚಂದ್ರಶೇಖರ್ ಸೇರಿ ಸಾರಿಗೆ ಒಕ್ಕೂಟದ 17 ಜನರ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಬಂಧನ ಭೀತಿ ಎದುರಾಗಿದೆ.
ಬಿಎಂಟಿಸಿ ಭದ್ರತಾ ನಿರೀಕ್ಷಕ ಕೆ.ಎಂ.ಮುನಿಕೃಷ್ಣ ಈ ಬಗ್ಗೆ ದೂರು ನೀಡಿದ್ದಾರೆ. ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ, ಅಕ್ರಮ ಕೂಟ, ಜೀವ ಬೆದರಿಕೆ, ಸಾರ್ವಜನಿಕ ಆಸ್ತಿಗೆ ಹಾನಿ, ಅಪರಾಧಕ್ಕೆ ಕುಮ್ಮಕ್ಕು, ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ. ವಿಚಾರಣೆಗೆ ನೋಟಿಸ್ ಜಾರಿ ಮಾಡುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.
ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಮೂಲಕ ಸಿಬ್ಬಂದಿಗೆ ಗೈರಾಗುವಂತೆ ಒತ್ತಾಯಿಸಿರುವ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಅಧ್ಯಕ್ಷ ಚಂದ್ರಶೇಖರ್, ಮಾಜಿ ನೌಕರ ಆನಂದ್, ನಿರ್ವಾಹಕಿ ಚಂಪಕಾವತಿ, ಬೆಂಗಳೂರು ಕೇಂದ್ರೀಯ ವಿಭಾಗದ ನೌಕರರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.
ಇದನ್ನೂ ಓದಿ: 'ನಮಗೆ ಯಾರೂ ಸಹಾಯ ಮಾಡಲ್ಲ': ದೆಹಲಿ ತೊರೆಯುತ್ತಿರುವ ವಲಸೆ ಕಾರ್ಮಿಕರ ವೇದನೆ