ಬೆಂಗಳೂರು : ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕ-2021ಕ್ಕೆ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಸದಸ್ಯರ ಸಭಾತ್ಯಾಗದ ನಡುವೆ ಧ್ವನಿಮತದ ಮೂಲಕ ವಿಧಾನ ಪರಿಷತ್‌ನಲ್ಲಿ ಅಂಗೀಕಾರ ನೀಡಲಾಯಿತು.
ವಿಧಾನ ಪರಿಷತ್ ಶಾಸನ ರಚನೆ ಕಲಾಪದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪರವಾಗಿ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕ ಮಂಡಿಸಿದರು.
ವಿಧೇಯಕದ ಮೇಲೆ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್, ಸಾರ್ವಜನಿಕರ ಹಣ, ತೆರಿಗೆ ರೂಪದ ಹಣ ನಗರಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆಗೆ ಬರಲಿದೆ. ಈ ಹಣದ ರಕ್ಷಣೆಗೆ ಇದರ ಮೇಲೆ ಹದ್ದಿನ ಕಣ್ಣಿಡಬೇಕಿದೆ. ಅವ್ಯವಹಾರ ಆಗದಂತೆ ನೋಡಿಕೊಳ್ಳಬೇಕು.
ಈ ರೀತಿಯ ತಿದ್ದುಪಡಿ ಅವಶ್ಯಕತೆ ಯಾಕೆ? ಕಳ್ಳನ ಕೈಗೆ ಕೀಲಿ ಕೈ ಕೊಟ್ಟ ರೀತಿ ಆಗಲಿದೆ. ಕೌಂಟರ್ ಚೆಕ್ ಬೇಡ ಎನ್ನುವುದು ಯಾಕೆ? ಇದನ್ನು ಮತ್ತಷ್ಟು ಬಿಗಿ ಮಾಡಬೇಕು. ಇದರ ಬದಲು ಅಕೌಂಟಬಿಲಿಟಿಯೇ ಇಲ್ಲದಂತಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಹಣಕಾಸು ಲೆಕ್ಕಪತ್ರ ನಿರ್ವಹಣೆ ಅಧಿಕಾರವನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕೊಡುವ ಬಿಲ್, ಹಾಗಾದರೆ ಎಲ್ಲಾ ಇಲಾಖೆಗೂ ಇದೇ ರೀತಿ ಅಧಿಕಾರ ಕೊಟ್ಟು ಬಿಡಿ ಎಂದರು. ತೇಜಸ್ವಿನಿಗೌಡ, ರವಿಕುಮಾರ್ ಸೇರಿ ಬಿಜೆಪಿ ಸದಸ್ಯರು ವಿಧೇಯಕವನ್ನು ಸಮರ್ಥಿಸಿಕೊಂಡರು.
'ಆಡಳಿತ, ಅನುಷ್ಠಾನದಲ್ಲಿ ಪಾರದರ್ಶಕತೆ ತರುವುದು ವಿಧೇಯಕದ ಉದ್ದೇಶ'
ನಂತರ ಚರ್ಚೆಗೆ ಉತ್ತರಿಸಿದ ಸಭಾನಯಕ ಕೋಟಾ ಶ್ರೀನಿವಾಸ ಪೂಜಾರಿ, ಆಡಳಿತ ಹಾಗೂ ಅನುಷ್ಠಾನದಲ್ಲಿ ಪಾರದರ್ಶಕತೆ ತರವುದು, ಹಣಕಾಸು ಉತ್ತಮ ನಿರ್ವಹಣೆಗೆ ಈ ವಿಧೇಯಕದ ಮುಖ್ಯ ಉದ್ದೇಶ.
ಕೇಂದ್ರ, ರಾಜ್ಯ ಸರ್ಕಾರದ ಅನುದಾನ ನೇರವಾಗಿ ಸ್ಥಳೀಯ ಆಡಳಿತಕ್ಕೆ ಹೋಗಬೇಕು ಎನ್ನುವ ಕಾರಣಕ್ಕೆ ವಿಧೇಯಕ ತರಲಾಗಿದೆ. ಆದರೆ, ಲೆಕ್ಕಪರಿಶೋಧನೆಯನ್ನು ಸಿಎಜಿ ಮಾಡಲಿದೆ. ಸರ್ವಾನುಮತದಿಂದ ಕೆಳಮನೆಯಲ್ಲಿ ಅಂಗೀಕಾರಗೊಂಡಿದೆ. ಇಲ್ಲಿಯೂ ಸರ್ವಾನುಮತದ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು.
ಆಡಳಿತಾತ್ಮಕ ನಿರ್ವಹಣೆ ಕಷ್ಟ ಎಂದು ಲೆಕ್ಕಪತ್ರ ಇಲಾಖೆ ಹೇಳಿದೆ. ಹಾಗಾಗಿ, ಆಡಳಿತದ ವಿಷಯದಲ್ಲಿ ಮಾತ್ರ ಅಧಿಕಾರವನ್ನು ಆಡಳಿತ ನೋಡಿಕೊಳ್ಳುವ ಇಲಾಖೆಗೆ ನೀಡುತ್ತಿದೆ. ಲೆಕ್ಕಪತ್ರದ ವಿಚಾರವನ್ನು ಲೆಕ್ಕಪತ್ರ ಇಲಾಖೆಯೇ ನೋಡಿಕೊಳ್ಳಲಿದೆ.
ಅವ್ಯವಹಾರಕ್ಕೆ ಆಸ್ಪದ ಇಲ್ಲ, ಲೋಪದೋಷವಾದಲ್ಲಿ ಪರಿಶೀಲಿಸುವ ಅಧಿಕಾರ ಸಿಎಜಿ ಕಾಯ್ದಿರಿಸಿಕೊಂಡಿದೆ ಎಂದು ಸ್ಪಷ್ಟಪಡಿಸಿದರು. ಸರ್ಕಾರದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸಭಾತ್ಯಾಗ ನಡೆಸಿದರು. ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ವಿಧೇಯಕವನ್ನು ವಿಧಾನ ಪರಿಷತ್ ಧ್ವನಿಮತದ ಮೂಲಕ ಅಂಗೀಕರಿಸಿತು.