ಬೆಂಗಳೂರು : ಇನ್ನು ಕೆಲವೇ ದಿನಗಳಲ್ಲಿ ನಡೆಯಬೇಕಿದ್ದ ಮದುವೆಗಾಗಿ ಕಲ್ಯಾಣ ಮಂಟಪ ಬುಕ್ ಮಾಡಿಕೊಂಡು ವಾಪಸ್ ಬರುತ್ತಿದ್ದಾಗ ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಪರಿವರ್ತಕ ಸ್ಫೋಟಗೊಂಡು ಯುವತಿ ಹಾಗೂ ಅವರ ತಂದೆ ತೀವ್ರವಾಗಿ ಸುಟ್ಟು ಗಾಯಗೊಂಡ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗನಹಳ್ಳಿಯಲ್ಲಿ ನಡೆದಿದೆ. ಯುವತಿ ಚೈತನ್ಯ(25), ಅವರ ತಂದೆ ಶಿವರಾಜ್(55) ಎಂಬುವರು ಗಂಭೀರವಾಗಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲವೇ ದಿನಗಳಲ್ಲಿ ಮಗಳ ಮದುವೆ ಇದ್ದ ಕಾರಣ ತಂದೆ ಶಿವರಾಜ್ ಅವರು ಕಲ್ಯಾಣ ಮಂಟಪವೊಂದನ್ನು ಬುಕ್ ಮಾಡಿಕೊಂಡು ಸ್ಕೂಟಿಯಲ್ಲಿ ನೈಸ್ರಸ್ತೆಯ ಮಂಗನಹಳ್ಳಿ ಬಳಿ ಹೋಗುತ್ತಿದ್ದಾಗ, ರಸ್ತೆ ಬದಿ ಇದ್ದ ವಿದ್ಯುತ್ ಪರಿವರ್ತಕ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ.
ಸ್ಫೋಟದ ತೀವ್ರತೆಗೆ ಶಿವರಾಜ್ ಹಾಗೂ ಚೈತನ್ಯರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ರಸ್ತೆ ಮೇಲೆ ಒದ್ದಾಡುತ್ತಿದ್ದ ಇಬ್ಬರನ್ನೂ ಅಲ್ಲಿಯೇ ಇದ್ದ ಸ್ಥಳೀಯರು ಧಾವಿಸಿ ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಟ್ರಾನ್ಸ್ಫಾರ್ಮರ್ ಸ್ಫೋಟಕ್ಕೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ.