ಬೆಂಗಳೂರು: ಭೂ ಸುಧಾರಣಾ ಕಾಯ್ದೆ ಸೇರಿದಂತೆ ರೈತರಿಗೆ ಮಾರಕವಾಗುವ ರೈತ ಪರ ಕಾಯ್ದೆಗಳಿಗೆ ತಿದ್ದುಪಡಿ ಮಾಡಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲು ರೈತ ಸಂಘಟನೆಗಳು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಬಂದ್ ನಡೆಸಲಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬರುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ರಸ್ತೆ ತಡೆ ಮಾಡುವ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕಾಯ್ದೆಗಳನ್ನು ವಾಪಸ್ ಪಡೆಯಲು ಸರ್ಕಾರಕ್ಕೆ ಒತ್ತಡ ಹೇರುತ್ತೇವೆ ಎಂದು ರಾಜ್ಯ ಕಬ್ಬು ಬೆಳೆಗಾರರ ಹಾಗೂ ರಾಜ್ಯ ಕಿಸಾನ್ ಮಹಾನ್ ಸಂಘ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ರೈತ, ಕಾರ್ಮಿಕ, ದಲಿತ ಹಾಗೂ ಅಸಂಘಟಿತ ಕಾರ್ಮಿಕರು ಒಳಗೊಂಡಂತೆ ಒಟ್ಟು 40ಕ್ಕೂ ಹೆಚ್ಚು ಸಂಘಟನೆಗಳು ಒಳಗೊಂಡಿರುವ ಐಕ್ಯ ಹೋರಾಟ ಸಮಿತಿಯು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಮುಂದೆ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ಇದಕ್ಕೂ ಮುನ್ನ ವಾಹನಗಳನ್ನು ತಡೆಯುವ ಮೂಲಕ ರಸ್ತೆ ತಡೆ ಮಾಡಿ ಜೈಲ್ ಭರೋ ಚಳವಳಿ ನಡೆಸಲಿವೆ.
ಬೆಂಗಳೂರು ಹೊರವಲಯದ ಎಲ್ಲ ದಿಕ್ಕಿನಲ್ಲೂ ರಾಜ್ಯ, ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುವುದು. ತುಮಕೂರು, ಮೈಸೂರು, ಬಳ್ಳಾರಿ ರಸ್ತೆ ಹಾಗೂ ಹಳೆ ಮದ್ರಾಸ್ ರಸ್ತೆ ತಡೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಎಲ್ಲೆಲ್ಲಿ ರಸ್ತೆ ತಡೆ?
ಮೈಸೂರು ರಸ್ತೆಯ ಕೋಲಂಬಿಯಾ ಆಸ್ಪತ್ರೆ ಮುಂಭಾಗ, ನಾಯಂಡಹಳ್ಳಿ, ಗೊರಗುಂಟೆಪಾಳ್ಯ, ನೆಲಮಂಗಲದ ನವಯುಗ ಟೋಲ್, ಬಳ್ಳಾರಿ ರಸ್ತೆಯ ಹೆಬ್ಬಾಳ ಫ್ಲೈಓವರ್, ಸಿಲ್ಕ್ ಬೋರ್ಡ್ ಜಂಕ್ಷನ್ ಗಳಲ್ಲಿ ಜೈಲು ಭರೋ ಚಳವಳಿ ನಡೆಯಲಿದೆ.
ಎಲ್ಲೆಲ್ಲಿ ಪ್ರತಿಭಟನೆ ಬಿಸಿ ?
ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಯುವ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರತಿಭಟನೆಯ ಬಿಸಿ ತಟ್ಟಲಿದೆ. ಮೈಸೂರು ಬ್ಯಾಂಕ್ ವೃತ್ತ ಬಳಿಯ ಎಲ್ಲ ರಸ್ತೆಗಳೂ ಬಂದ್ ಆಗಲಿವೆ. ಕಾರ್ಪೊರೇಷನ್ ವೃತ್ತ, ಆನಂದ್ ರಾವ್, ಮೆಜೆಸ್ಟಿಕ್, ಮೌರ್ಯ ವೃತ್ತ, ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತವಾಗುವ ಸಾಧ್ಯತೆಯಿದೆ.