ಬೆಂಗಳೂರು: ಸಿಡಿ ಪ್ರಕರಣದ ಸಂತ್ರಸ್ತ ಯುವತಿಯನ್ನು ನಿನ್ನೆ ಎಸ್ಐಟಿ ವಿಚಾರಣೆ ನಡೆಸಿ, ಇಂದು ಹಾಜರಾಗುವಂತೆ ನೊಟೀಸ್ ನೀಡಿದ ಮೇರೆಗೆ ಪೊಲೀಸ್ ಭದ್ರತೆಯಡಿ ಮತ್ತೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಕೊಡಿಗೇಹಳ್ಳಿಯಲ್ಲಿರುವ ವಕೀಲ ಜಗದೀಶ್ ಮನೆಯಲ್ಲಿ ಯುವತಿ ಇದ್ದಾಳೆ ಎನ್ನಲಾಗಿದ್ದು, ಅಲ್ಲಿಂದ ನೇರವಾಗಿ ಆಡುಗೋಡಿಯ ವಿಚಾರಣಾ ಕೇಂದ್ರಕ್ಕೆ ಪೊಲೀಸ್ ಭದ್ರತೆಯಡಿ ಬರಲಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಎರಡು ಗಂಟೆಗಳ ಕಾಲ ಎಸ್ಐಟಿ ಅಧಿಕಾರಿಗಳು ಯುವತಿಯನ್ನು ವಿಚಾರಣೆಗೊಳಪಡಿಸಿದ್ದರು. ಈ ವೇಳೆ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೀಡಿದ್ದಾರೆ ಎನ್ನಲಾದ ಉಡುಗೊರೆ ಹಾಗೂ ಅವರೊಂದಿಗೆ ಮಾತನಾಡಿದ ಮೊಬೈಲ್ ಕರೆಗಳ ಸಾಕ್ಷ್ಯವನ್ನು ಯುವತಿ ನೀಡಿದ್ದಳು. ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸದ ಯುವತಿ ಸಮಯ ಕೇಳಿದ ಹಿನ್ನೆಲೆಯಲ್ಲಿ ವಿಚಾರಣೆ ಅಂತ್ಯಗೊಳಿಸಿ, ಇಂದು ವಿಚಾರಣೆ ಬರುವಂತೆ ನೊಟೀಸ್ ಜಾರಿ ಮಾಡಿದ್ದರು.
ಆಡುಗೋಡಿಯ ವಿಚಾರಣಾ ಕೇಂದ್ರಕ್ಕೆ ಯುವತಿ ಬಂದ ನಂತರ ಆಕೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲು ತನಿಖಾಧಿಕಾರಿಗಳು ಸಿದ್ದತೆ ನಡೆಸಿದ್ದಾರೆ. ಮೆಡಿಕಲ್ ಟೆಸ್ಟ್ ಬಳಿಕ ಸಂಪೂರ್ಣ ವಿಚಾರಣೆಗೊಳಪಡಿಸಲಿದ್ದಾರೆ. ರಮೇಶ್ ಜಾರಕಿಹೊಳಿಯ ಪರಿಚಯ ಹೇಗೆ, ಯಾವಾಗ ಭೇಟಿಯಾಗಿದ್ದು ಎಲ್ಲಿ, ಕೃತ್ಯ ಎಸಗಿದ್ದು ಎಲ್ಲಿ, ಶಂಕಿತ ಆರೋಪಿಗಳೊಂದಿಗೆ ಇರುವ ನಂಟಿನ ಬಗ್ಗೆ ಪ್ರಶ್ನಿಸಲಿದ್ದಾರೆ. ಯುವತಿಯಿಂದ ಉತ್ತರಗಳ ಮೇಲೆ ಉಪ ಪ್ರಶ್ನೆಗಳನ್ನು ಕೇಳಲು ತಯಾರು ಮಾಡಿಕೊಂಡಿದ್ದಾರೆ.
ಮಹಜರಿಗೆ ಕರೆದೊಯ್ಯುವ ಸಾಧ್ಯತೆ:
ಕೆಲಸ ಕೊಡಿಸುವುದಾಗಿ ಹೇಳಿ ಅಪಾರ್ಟ್ಮೆಂಟ್ಗೆ ಕರೆಯಿಸಿಕೊಂಡು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಯುವತಿ ದೂರು ನೀಡಿದ್ದಳು. ತನಿಖಾಧಿಕಾರಿಗಳ ವಿಚಾರಣೆ ವೇಳೆ ಇದೇ ಹೇಳಿಕೆ ನೀಡಿದರೆ, ಮಹಜರಿಗೆ ಕರೆದುಕೊಂಡು ಕೃತ್ಯ ಎಸಗಿದ ಸ್ಥಳದ ಬಗ್ಗೆ ಪೊಲೀಸರು ಖಚಿತಪಡಿಸಿಕೊಳ್ಳಲಿದ್ದಾರೆ. ಬಳಿಕ ವಾಯ್ಸ್ ಸ್ಯಾಂಪಲ್ ಪಡೆದು ಎಫ್ಎಸ್ಎಲ್ಗೆ ಕಳುಹಿಸಿಕೊಡಲಿದ್ದಾರೆ.
164 ಹೇಳಿಕೆ ಅಡಿಯಲ್ಲಿ ನ್ಯಾಯಾಧೀಶರ ಮುಂದೆ ನೀಡಿರೋ ಹೇಳಿಕೆ ಪ್ರತಿ ಇಂದು ಮಧ್ಯಾಹ್ನ ತನಿಖಾಧಿಕಾರಿ ಕೈಗೆ ಸೇರಲಿದೆ. ಯುವತಿಯ ಸ್ವ-ಇಚ್ಚಾ ಹೇಳಿಕೆಯ ದಾಖಲಿಸಿಕೊಂಡಿರುವ ನ್ಯಾಯಾಧೀಶರು, ವಿಚಾರಣಾಧೀನ ನ್ಯಾಯಾಲಯಕ್ಕೆ ಪ್ರತಿ ಕಳುಹಿಸಿಕೊಡಲಿದ್ದಾರೆ.
ಓದಿ: ಎಸ್ಐಟಿ ವಿಚಾರಣೆ ಮುಕ್ತಾಯ.. ನಾಳೆ ವಿಚಾರಣೆಗೆ ಹಾಜರಾಗುವಂತೆ ಯುವತಿಗೆ ನೋಟಿಸ್