ಬೆಂಗಳೂರು : ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾ ಎಲ್ಲಾ ಸಮಸ್ಯೆಗಳನ್ನ ದಾಟಿ ಇಂದು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ.
ರಿಲೀಸ್ ಆದ ಎಲ್ಲಾ ಚಿತ್ರಮಂದಿಗಳಲ್ಲಿ ಕೋಟಿಗೊಬ್ಬ-3 ಸಿನಿಮಾವನ್ನ ಅಭಿಮಾನಿಗಳು ನೋಡಿ ಕಣ್ಣು ತುಂಬಿಕೊಂಡಿದ್ದಾರೆ. ಅದೇ ರೀತಿ ಬೆಂಗಳೂರಿನ ಮುಖ್ಯ ಚಿತ್ರಮಂದಿರದಲ್ಲಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ನೆಚ್ಚಿನ ನಟನ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ.
2 ವರ್ಷದಿಂದ ಕಾದಿದಕ್ಕೆ ಸುದೀಪ್ ಬಾಸ್ ಒಳ್ಳೆ ಸಿನಿಮಾ ಮಾಡಿದ್ದಾರೆ ಎಂದು ಸಿನಿಮಾ ನೋಡಿದ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಕಿಚ್ಚ ದ್ವಿ ಪಾತ್ರದಲ್ಲಿ ಕಾಣಿಸಿಕೊಂಡು, ಪ್ರೇಕ್ಷಕರನ್ನ ರಂಜಿಸಿದ್ದಾರೆ.
ಕಿಚ್ಚ ಸುದೀಪ್ ಕೂಡ, ಬೆಳಗ್ಗೆಯಿಂದಲೇ ಕೋಟಿಗೊಬ್ಬ 3 ಸಿನಿಮಾದ ಶೋ ಸ್ಟಾರ್ಟ್ ಆಗಿದೆ ಎಂದು ಸಾಮಾಜಿಕ ಜಾಲಾತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಥ್ರಿಲ್ಲಿಂಗ್ ಜತೆಗೆ ತಾಯಿ ಸೆಂಟಿಮೆಂಟ್ ಕತೆ ಆಧರಿಸಿರುವ ಕೋಟಿಗೊಬ್ಬ 3 ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿದ್ದಾರೆ.
ಸಿನಿಮಾದಲ್ಲಿ ಕಿಚ್ಚನ ಎಂಟ್ರಿಗೆ ಥಿಯೇಟರ್ನಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಮುದುಕನ ಗೆಟಪ್ನಲ್ಲಿ ಎಂಟ್ರಿ ಕೊಡುವ ಸುದೀಪ್ ಥೇಟ್ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ತರ ಕಾಣುತ್ತಾರೆ. ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ.
ಸುದೀಪ್ ಸೇರಿದಂತೆ ಮಡೋನ್ನಾ ಸಬಾಸ್ಟಿಯನ್, ಶ್ರದ್ಧಾ ದಾಸ್, ಅಫ್ಲಾಟ್ ಶಿವದಾಸನ್, ರವಿಶಂಕರ್, ಅಭಿರಾಮಿ, ರಾಜೇಶ್ ನಟರಂಗ, ನವಾಬ್ ಶಾ, ತಾರಕ್ ಪೊನ್ನಪ್ಪ ಸೇರಿದಂತೆ ಪ್ರತಿಯೊಬ್ಬರ ನಟನೆ ಚೆನ್ನಾಗಿದೆ.
ಪಟಾಕಿ ಪೋರಿಯೋ ಹಾಡಿನಲ್ಲಿ ಆಶಿಕಾ ರಂಗನಾಥ್ ಮಿಂಚಿದ್ದಾರೆ. ಇನ್ನು, ಪೋಲ್ಯಾಂಡ್ ಕಾರು ಚೇಸಿಂಗ್ ದೃಶ್ಯ ಕಿಚ್ಚನ ಅಭಿಮಾನಿಗಳಿಗೆ ಕಿಕ್ ಕೊಡುತ್ತದೆ. ಇದರ ಜತೆಗೆ ಅರ್ಜುನ್ ಜನ್ಯ ಮ್ಯೂಸಿಕ್, ಶೇಖರ್ ಚಂದ್ರ ಕ್ಯಾಮೆರಾ ವರ್ಕ್ ಕೋಟಿಗೊಬ್ಬ 3 ಸಿನಿಮಾಗೆ ಪ್ಲಸ್ ಪಾಯಿಂಟ್.
ಕಿಚ್ಚ ಸುದೀಪ್ ಸತ್ಯ ಹಾಗೂ ಶಿವನಾಗಿ ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದ್ದಾರೆ. ಒಂದು ಕಮರ್ಷಿಯಲ್ ಸಿನಿಮಾಗೆ ಬೇಕಾಗುವ ಎಲ್ಲಾ ಎಲಿಮೆಂಟ್ ಹೊಂದಿರುವ ಕೋಟಿಗೊಬ್ಬ 3 ಸಿನಿಮಾವನ್ನ ಕುಟುಂಬ ಸಮೇತ ನೋಡಬಹುದಾಗಿದೆ.
ಇದನ್ನೂ ಓದಿ: 'ಕೋಟಿಗೊಬ್ಬ 3' ಗ್ರ್ಯಾಂಡ್ ರಿಲೀಸ್: ಕಲಬುರಗಿಯಲ್ಲಿ ಕಿಚ್ಚನ ಕಟೌಟ್ಗೆ ಕ್ಷೀರಾಭಿಷೇಕ