ಬೆಂಗಳೂರು: ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲೇ ಮಹಿಳೆಯರ ಮೇಲೆ ಹೆಚ್ಚಿನ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಕೌಟುಂಬಿಕ ದೌರ್ಜನ್ಯ, ಆತ್ಯಾಚಾರ ಪ್ರಕರಣಗಳು ಹೆಚ್ಚಿದ್ದರೆ ಇತ್ತ ನಗರ ಪ್ರದೇಶದಲ್ಲಿ ಲಿವಿಂಗ್ ರಿಲೇಷನ್ ಶಿಪ್, ಲವ್ ಅಫೇರ್, ಸೈಬರ್ ಕ್ರೈಂ ನಂತಹ ಪ್ರಕರಣಗಳು ಹೆಚ್ಚಾಗಿ ಕಾಣಬಹುದು ಅಂತಾರೆ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು.
ಇಂದು ರಾಜ್ಯ ಮಹಿಳಾ ಆಯೋಗದಿಂದ ನಗರದ ಖಾಸಗಿ ಹೋಟೆಲ್ನಲ್ಲಿ ಮಹಿಳಾ ದಿನವನ್ನು ಆಚರಿಸಲಾಯಿತು. ಇದರಲ್ಲಿ ಕಾಲೇಜು ಹುಡುಗಿಯರಿಗೆ, ಕೆಲಸಕ್ಕೆ ಹೋಗುವ ಉದ್ಯೋಗಿಗಳಿಗೆ ಸೈಬರ್ ಕ್ರೈಂ ಕುರಿತು ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಭಾಗಿಯಾಗಿದ್ದರು.
ಇದೇ ವೇಳೆ ಮಾತಾನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಮಹಿಳೆಯರ ಮೇಲೆ ನಾನಾ ರೀತಿಯ ದೌರ್ಜನ್ಯಗಳು ನಡೆಯುತ್ತಲೇ ಇವೆ. ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಕೌಟುಂಬಿಕ ದೌರ್ಜನ್ಯದಂತಹ ದೂರುಗಳೇ ಅತೀ ಹೆಚ್ಚು ಬರುತ್ತಿವೆ ಅಂತ ತಿಳಿಸಿದರು.
ಅಧಿಕಾರ ಸ್ವೀಕರಿಸಿದ ಎರಡು ವರ್ಷದಿಂದ ಈವರೆಗೆ 4,692 ದೂರುಗಳನ್ನು ಸ್ವೀಕೃತಿ ಮಾಡಿದ್ದು, ಇದರಲ್ಲಿ 1,890 ಪ್ರಕರಣಗಳು ಇತ್ಯರ್ಥವಾಗಿ ಮುಕ್ತಾಯ ಕಂಡಿವೆ. ಬಾಕಿ ಉಳಿದ 2,802 ದೂರುಗಳು ಚಾಲ್ತಿಯಲ್ಲಿ ಇವೆ. ಹೆಚ್ಚು ಕೇಸ್ಗಳಲ್ಲಿ ಮಹಿಳೆಯರು ರಕ್ಷಣೆ ಕೋರಿ ಬಂದವರೇ ಇದ್ದಾರೆ. ಆಸ್ತಿ ವಿವಾದದಿಂದ ಹಿಡಿದು ಕೆಲಸದ ಸ್ಥಳದಲ್ಲಿ ಕಿರುಕುಳ ಆದಾಗ ರಕ್ಷಣೆಗಾಗಿ ಸಾಕಷ್ಟು ಮಹಿಳೆಯರು ದೂರು ನೀಡಲು ಬರುತ್ತಾರೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗೆಯೇ ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ-ಪ್ರೇಮದ ವಿಚಾರದಲ್ಲಿ ಹೆಚ್ಚಾಗಿ ಸಿಲುಕಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ, ಕಾಲೇಜು- ವಿಶ್ವವಿದ್ಯಾಲಯಕ್ಕೆ ತೆರಳಿ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ದೂರು ಸಮಿತಿ: ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (ತಡೆಗಟ್ಟುವಿಕೆ, ನಿಷೇಧಿಸುವುವಿಕೆ, ನಿವಾರಿಸುವಿಕೆ) ಅಧಿನಿಯಮ 2013ರ ಅನ್ವಯ ಸರ್ಕಾರಿ/ಖಾಸಗಿ ಕಚೇರಿಗಳಲ್ಲಿ ಕಡ್ಡಾಯವಾಗಿ ಆಂತರಿಕ ದೂರು ಸಮಿತಿಯನ್ನು ರಚಿಸುವುದು ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ದೂರು ಸಮಿತಿಯನ್ನು ರಚಿಸುವುದು ಕಡ್ಡಾಯವಾಗಿದೆ. ಈಗಾಗಲೇ 401 ಸರ್ಕಾರಿ ಕಚೇರಿಗಳಲ್ಲಿ 1,198 ಖಾಸಗಿ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿಯನ್ನು ರಚಿಸಲಾಗಿದೆ. ಒಟ್ಟು 31 ಜಿಲ್ಲೆಗಳಲ್ಲಿ ಸ್ಥಳೀಯ ದೂರು ಸಮಿತಿಯನ್ನು ರಚಿಸಲಾಗಿದೆ. 98 ಇಲಾಖೆಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ವವರಿಸಿದರು.
ಇದನ್ನೂ ಓದಿ: ಉಕ್ರೇನ್ನಿಂದ ಮರಳಿದ ಮೆಡಿಕಲ್ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ರು ಡಾ. ಪ್ರಭಾಕರ್ ಕೋರೆ
ರಾಜ್ಯ ಮಹಿಳಾ ಆಯೋಗದ ವತಿಯಿಂದ ಈಗಾಗಲೇ 5 ಸಾವಿರ ಕಂಪನಿಗಳಿಗೆ ಆಂತರಿಕ ದೂರು ಸಮಿತಿ ರಚಿಸಲು ಪತ್ರಗಳನ್ನು ಕಳುಹಿಸಲಾಗಿದೆ. ಆದರಂತೆ ಸುಮಾರು 1,198 ಕಂಪನಿಗಳಿಂದ ಆಂತರಿಕ ದೂರು ಸಮಿತಿ ರಚಿಸಿರುವ ಬಗ್ಗೆ ಮಾಹಿತಿಯನ್ನು ಆಯೋಗಕ್ಕೆ ಕಳುಹಿಸಿದ್ದಾರೆ. ಉಳಿದವರಿಗೂ ಸಮಿತಿ ರಚಿಸುವಂತೆ ಸೂಚಿಸಲಾಗುವುದು ಅಂತ ತಿಳಿಸಿದರು.
ಯಾವ್ಯಾವ ಪ್ರಕರಣಗಳು ಎಷ್ಟೆಷ್ಟು?
ಪ್ರಕರಣ | ಸ್ವೀಕೃತಿ | ಇತ್ಯರ್ಥ | ಚಾಲ್ತಿ |
ಕೌಟುಂಬಿಕ ದೌರ್ಜನ್ಯ | 1070 | 330 | 740 |
ರಕ್ಷಣೆ | 1337 | 736 | 601 |
ವರದಕ್ಷಿಣಿ ಕಿರುಕುಳ | 227 | 41 | 186 |
ಲೈಂಗಿಕ ಕಿರುಕುಳ | 62 | 17 | 45 |
ಕೆಲಸದ ಸ್ಥಳದಲ್ಲಿ ಕಿರುಕುಳ | 200 | 34 | 166 |
ಪ್ರೇಮ ಪ್ರಕರಣ | 77 | 19 | 58 |
ಆಸ್ತಿ ವಿವಾದ | 160 | 82 | 78 |
ಪೊಲೀಸ್ ದೌರ್ಜನ್ಯ | 154 | 39 | 115 |
ಹಣ ವಂಚನೆ | 91 | 56 | 35 |
ಇತರೆ | 1230 | 515 | 715 |