ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಸೃಷ್ಟಿಸಿ ಫೋರ್ಜರಿ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ತನಿಖೆ ವೇಳೆ ಆರೋಪಿ ಕೆಲ ವಿಷಯಗಳನ್ನು ಬಾಯಿ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಹೈದಾರಾಬಾದ್ ಮೂಲದ ಸಾಯಿ ಕೃಷ್ಣ ಬಂಧಿತ ಆರೋಪಿ. ಉನ್ನತ ವಿದ್ಯಾಭ್ಯಾಸ ಪಡೆದ ಈತ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ. ಓದುತ್ತಾ ಹಣ ಮಾಡಬೇಕೆಂಬ ಉದ್ದೇಶದಿಂದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಬಹಳಷ್ಟು ಅನುಭವ ಹೊಂದಿದ ಕಾರಣ 'ಆಫರ್ಸ್ ನಿಯರ್ ಬೈ' ಎಂಬ ಮೊಬೈಲ್ ಆ್ಯಪ್ ಅಭಿವೃದ್ಧಿ ಮಾಡಿದ್ದನಂತೆ. ಅದರ ಪ್ರಚಾರಕ್ಕೆ ನಟ ವಿಜಯ್ ದೇವರಕೊಂಡ ಅವರನ್ನು ಬ್ರಾಂಡ್ ಅಂಬಾಸಿಡರ್ ಮಾಡಲು ನಿರ್ಧಾರ ಮಾಡಿ ಎರಡು ಬಾರಿ ಸಂಪರ್ಕ ಮಾಡಲು ತಯಾರಿ ನಡೆಸಿದ್ದನಂತೆ. ಆದರೆ ಸಂಪರ್ಕಕ್ಕೆ ಸಿಗದ ಕಾರಣ ಸುಧಾಮೂರ್ತಿ ಹೆಸರಿನಲ್ಲಿ ನಕಲಿ ಲೆಟರ್ ಸೃಷ್ಟಿಸಿ ನಟನನ್ನು ಇಂಪ್ರೆಸ್ ಮಾಡಲು ಹೋಗಿದ್ದಾಗಿ ತಿಳಿಸಿದ್ದಾನೆ.
ಏನಿದು ಪ್ರಕರಣ?
ಸುಧಾಮೂರ್ತಿ ಹೆಸರಿನಲ್ಲಿ ಫೋರ್ಜರಿ ಸಹಿ...ಹೈದ್ರಾಬಾದ್ ಮೂಲದ ಟೆಕ್ಕಿ ವಶ
ನಟ ವಿಜಯ್ ದೇವರಕೊಂಡ ಕಚೇರಿಯವರು ಇನ್ಫೊಸಿಸ್ ಫೌಂಡೇಷನ್ ಕಚೇರಿ ಅಧಿಕಾರಿಗಳನ್ನು ಸಂಪರ್ಕ ಮಾಡಿ ವಿಚಾರಿಸಿದಾಗ ನಕಲಿ ಲೇಟರ್ ಹೆಡ್ ವಿಚಾರ ತಿಳಿದಿತ್ತು. ಹೀಗಾಗಿ ಫೆ. 26ರಂದು ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಇನ್ಫೋಸಿಸ್ ಫೌಂಡೇಶನ್ ಕಚೇರಿಯ ಲೆ.ಕರ್ನಲ್ ರಮೇಶ್ ಎಂಬುವರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.