ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೂಲಕ ಬಿಜೆಪಿ ಆಪರೇಷನ್ ಕಮಲದ ಲೆಕ್ಕಾಚಾರವನ್ನು ಜೀವಂತಗೊಳಿಸಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ರಾಜ್ಯದಲ್ಲಿ ಮತ್ತೆ ಚುರುಕುಗೊಂಡ ಆಪರೇಷನ್ ಕಮಲಕ್ಕೆ ರಮೇಶ್ ಸೂತ್ರದಾರರಾಗಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ರಮೇಶ್ ಕನಿಷ್ಠ 10-15 ಮಂದಿ ಶಾಸಕರನ್ನು ತಮ್ಮತ್ತ ಸೆಳೆಯುವ ಯತ್ನದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಈಗಾಗಲೆ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ನಿನ್ನೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಮಾಜಿ ಶಾಸಕ ನಾಗರಾಜು ಭೇಟಿ ನೀಡಿದ್ದರು. ಇಂದು ಮಹೇಶ್ ಕುಮಟಳ್ಳಿ ಭೇಟಿ ನೀಡಿದ್ದಾರೆ. ಇಂದು ರಾತ್ರಿ ಸಹ ಕೆಲ ನಾಯಕರು ಆಗಮಿಸಿ, ರಮೇಶ್ರೊಂದಿಗೆ ಸಮಾಲೋಚಿಸಲಿದ್ದಾರೆ ಎನ್ನಲಾಗುತ್ತಿದೆ.
ರಮೇಶ್ ಮನೆಗೆ ಬಿಜೆಪಿ ಮುಖಂಡರ ಭೇಟಿ ವೇಳೆ ಮಹತ್ವದ ಚರ್ಚೆಗಳು ನಡೆದಿವೆ. ರಮೇಶ್ ಸಹ ಸಂಪೂರ್ಣ ಚುರುಕಾಗಿದ್ದು, ಮೇ 23ರ ಚುನಾವಣಾ ಫಲಿತಾಂಶದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್ಗೆ ತಾವೊಬ್ಬರೆ ರಾಜೀನಾಮೆ ನೀಡುವ ಬದಲು ಇನ್ನಷ್ಟು ಮಂದಿ ಶಾಸಕರನ್ನು ಹೊರಬರುವಂತೆ ಮಾಡುವ ಪ್ಲಾನ್ ಮಾಡುತ್ತಿದ್ದಾರೆ. ಅಲ್ಲಿಯವರೆಗೂ ಆಪ್ತ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿ ಇರುವ ಬಗ್ಗೆಯೇ ಮಹೇಶ್ ಕುಮಟಳ್ಳಿ ಜತೆ ಇಂದು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.