ದೊಡ್ಡಬಳ್ಳಾಪುರ: ಕೆಲಸಕ್ಕೆಂದು ಫ್ಯಾಕ್ಟರಿಗೆ ಹೋಗಿದ್ದ ನೌಕರನೋರ್ವ ಮರುದಿನ ಫ್ಯಾಕ್ಟರಿಯ ಬೇಸ್ ಮೆಂಟ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯಲ್ಲಿರುವ ಜೆಎಫ್‌ಎಸ್‌ಎಲ್ ಫ್ಯಾಕ್ಟರಿಯಲ್ಲಿ ಈ ಘಟನೆ ನಡೆದಿದೆ.
ಗೌರಿಬಿದನೂರು ತಾಲೂಕಿನ ಕಲ್ಲಿನಾಯಕನಹಳ್ಳಿ ನಿವಾಸಿ ಲಿಂಗಪ್ಪ (45) ಮೃತ ನೌಕರ. ಲಿಂಗಪ್ಪ ಕಳೆದ 10 ವರ್ಷಗಳಿಂದ ಫ್ಯಾಕ್ಟರಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಬುಧವಾರ ಸಹ ಕೆಲಸಕ್ಕೆ ಬಂದಿದ್ದು ಫ್ಯಾಕ್ಟರಿಯಲ್ಲಿಯೇ ಉಳಿದುಕೊಂಡಿದ್ದರು. ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಫ್ಯಾಕ್ಟರಿಯ ಬೇಸ್ ಮೆಂಟ್‌ನಲ್ಲಿ ಲಿಂಗಪ್ಪ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೂಡಲೇ ಫ್ಯಾಕ್ಟರಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರು ಬರುವ ಮುನ್ನವೇ ಮೃತ ದೇಹವನ್ನ ಸ್ಥಳಾಂತರ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಲಿಂಗಪ್ಪ ಆತ್ಮಹತ್ಯೆಗೆ ಸಂಬಂಧಿಸಿದಂತೆ ಆತನ ಕುಟುಂಬಸ್ದರು ಹಲವು ರೀತಿಯ ಅನುಮಾನ ವ್ಯಕ್ತಪಡಿಸಿದ್ದಾರೆ. ಸಾವಿಗೆ ಫ್ಯಾಕ್ಟರಿಯ ಕೆಲವು ನೌಕರರು ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ. ಜತೆಗೆ, ಕುಟುಂಬಸ್ಥರು ಬರುವ ಮುಂಚೆಯೇ ಲಿಂಗಪ್ಪ ಆತ್ಮಹತ್ಯೆ ಮಾಡಿಕೊಂಡ ಸ್ಥಳದಿಂದ ಪೊಲೀಸರು ಮೃತದೇಹ ಸ್ಥಳಾಂತರಿಸಿದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ. ಲಿಂಗಪ್ಪ ಸಾವಿಗೆ ನ್ಯಾಯ ಸಿಗುವವರೆಗೆ ಮೃತದೇಹವನ್ನು ಕೊಂಡೊಯ್ಯಲು ಬಿಡುವುದಿಲ್ಲ ಎಂದು ಸಂಬಂಧಿಕರು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಹಾಗೂ ಲಿಂಗಪ್ಪ ಅವರ ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಹಲವು ಗಂಟೆಗಳು ಕಳೆದರೂ ಕೂಡ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲು ಬಿಡಲಿಲ್ಲ.
ಘಟನೆ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಪುತ್ರ ಮನು, ನಮ್ಮ ತಂದೆಯ ಮೃತದೇಹವನ್ನು ನಾವು ಬರುವ ಮುಂಚೆಯೇ ಸ್ಥಳಾಂತರಿಸಿದ್ದು ಏಕೆ?, ಅವರ ಸಾವಿನಿಂದ ನಾವು ದಿಕ್ಕಿಲ್ಲದವರಂತೆ ಆಗಿದ್ದೇವೆ. ನಮ್ಮ ತಂದೆ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಕರಣದ ಗಂಭೀರತೆ ಅರಿತು ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ರಂಗಪ್ಪ, ಲಿಂಗಪ್ಪ ಸಂಬಂಧಿಕರು ಹಾಗೂ ಫ್ಯಾಕ್ಟರಿ ಹೆಚ್ಆರ್ ಮ್ಯಾನೇಜರ್ ಜತೆ ಮಾತುಕತೆ ನಡೆಸಿದರು. ಜತೆಗೆ ನಿಮ್ಮ ಆರೋಪಗಳ ಸಮೇತ ದೂರು ನೀಡಿ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲು ಬಿಡಿ. ಪ್ರಕರಣದ ಸತ್ಯಾಸತ್ಯತೆ ತಿಳಿಯಲು ತನಿಖೆ ನಡೆಯಬೇಕು ಎಂದು ಮನವೊಲಿಸುವಲ್ಲಿ ಯಶಸ್ವಿಯಾದರು. ಬಳಿಕ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತರಲಾಯಿತು.