ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಬಳಿ ವೇಗವಾಗಿ ಚಾಲನೆ ಮಾಡಿ ಇಬ್ಬರ ಸಾವಿಗೆ ಕಾರಣವಾಗಿ ಗಂಭೀರ ಗಾಯಗೊಂಡಿದ್ದ ಕಾರು ಚಾಲಕ ಇತ್ತೀಚೆಗೆ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದು, ಹಾಸಿಗೆಯಿಂದ ಮೇಲೇಳಲೂ ಆಗದ ಸ್ಥಿತಿಯಲ್ಲಿದ್ದಾನೆ. ಈ ಮಧ್ಯೆ ಮಾನವೀಯತೆ ಹಿನ್ನೆಲೆಯಲ್ಲಿ ಆತನಿಗೆ ಠಾಣಾ ಜಾಮೀನು ದೊರೆತಿದೆ.
ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಕಳೆದ ಸೆ.14 ರಂದು ನಡೆದಿದ್ದ ಅಪಘಾತದಲ್ಲಿ ಪ್ರೀತಮ್ ಮತ್ತು ಕೃತಿಕಾ ಫ್ಲೈ ಓವರ್ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದರು. ಅಂದಿನ ಅಪಘಾತಕ್ಕೆ ಕಾರಣನಾದ ಕಾರು ಚಾಲಕ ನಿತೇಶ್ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗಿದ್ದಾನೆ. ನಿತೇಶ್ಗೆ ಸ್ಪೈನಲ್ ಕಾರ್ಡ್, ಹಿಪ್ಸ್, ಚೆಸ್ಟ್ ಹಾಗೂ ಕಾಲುಗಳಿಗೆ ಪೆಟ್ಟು ಬಿದ್ದಿದೆ. ಹೀಗಾಗಿ ಮಲಗಿದ್ದ ಜಾಗದಲ್ಲಿಯೇ ಮಲಗುವಂತಾಗಿದೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸ್ಟೇಷನ್ ಬೇಲ್ ನೀಡಿದ್ದಾರೆ.
ಇದನ್ನೂ ಓದಿ: Watch.. ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲಿನ ಅಪಘಾತದಲ್ಲಿ ಯುವಕ-ಯುವತಿ ಸಾವು: ಭಯಾನಕ ದೃಶ್ಯ CCTVಯಲ್ಲಿ ಸೆರೆ
ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆಸ್ಪತ್ರೆಯಲ್ಲೇ ನಿತೇಶ್ ಹೇಳಿಕೆ ಪಡೆದಿದ್ದಾರೆ. ಆರೋಪಿ ನೀಡಿರುವ ಹೇಳಿಕೆಯಲ್ಲಿ ಅಲ್ಲಿಗೆ ಬಂದಾಗ ಏನಾಯಿತು ನನಗೆ ಗೊತ್ತಿಲ್ಲ, ಸ್ಪೀಡ್ನಲ್ಲಿದ್ದೆ ಎಂಬುದಷ್ಟೇ ನನಗೆ ಗೊತ್ತು. ಆ ನಂತರ ಏನಾಯಿತು ಎಂದು ನನಗೆ ಗೊತಾಗುತ್ತಿಲ್ಲ. ರಸ್ತೆ ಬಿಟ್ಟು ಯಾಕೆ ಪಕ್ಕಕ್ಕೆ ಹೋದೆ ಎಂಬುವುದು ನನಗೆ ಗೊತ್ತಿಲ್ಲ. ಲೇ ಬೇ ಬಳಿ ಬಂದಾಗ ನನಗೆ ಏನಾಯಿತೋ ಗೊತ್ತಿಲ್ಲ ಎಂದು ಹೇಳಿದ್ದಾನೆ.
ಇನ್ನೊಂದು ವಾರದಲ್ಲಿ ಚಾರ್ಜ್‌ಶೀಟ್
ಫ್ಲೈ ಓವರ್ ಅಪಘಾತ ಪ್ರಕರಣ ಸಂಬಂಧಿಸಿದಂತೆ ಎಲ್ಲಾ ಸಾಕ್ಷಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಇನ್ನೊಂದು ವಾರದಲ್ಲಿ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಕೂಡ ಸಲ್ಲಿಸಲಿದ್ದಾರೆ. ಅಂದು ಅಪಘಾತವಾದ ಸಮಯದಲ್ಲಿ ಅದೇ ಲೇ ಬೇನಲ್ಲಿ ನಿಂತಿದ್ದ 4-5 ಜನ ಪ್ರಕರಣಕ್ಕೆ ಬಲವಾದ ಪ್ರತ್ಯಕ್ಷ ಸಾಕ್ಷಿಗಳಾಗಿದ್ದಾರೆ. ಜೊತೆಗೆ ಫ್ಲೈ ಓವರ್ ಉದ್ದಕ್ಕೂ ಸಿಸಿಟಿವಿ ಇರುವುದರಿಂದ ಆರೋಪಿ ಕಾರನ್ನು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಅಪಘಾತ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೀಗಾಗಿ 279 ಹಾಗೂ 304(ಎ) ಅಡಿ ಆರೋಪಿಗೆ 3 ವರ್ಷದವರೆಗೂ ಜೈಲು ಶಿಕ್ಷೆ ಹಾಗೂ ಡಂಡ ಬೀಳುವುದು ಖಚಿತ ಎನ್ನುತ್ತಾರೆ ಕಾನೂನು ತಜ್ಞರು.
ನಿತೇಶ್ ಅಜಾಗರೂಕ ಹಾಗೂ ಅತೀ ವೇಗದ ವಾಹನ ಚಾಲನೆ ಮಾಡಿ ಇಬ್ಬರು ಅಮಾಯಕರ ಸಾವಿಗೆ ಕಾರಣನಾಗಿ, ಇದೀಗ ತಾನೂ ಹಾಸಿಗೆ ಹಿಡಿದಿದ್ದಾನೆ.
ಇದನ್ನೂ ಓದಿ:ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಅಪಘಾತ ಪ್ರಕರಣ... ವೇಗದ ಚಾಲನೆಯೇ ದುರಂತಕ್ಕೆ ಕಾರಣ : ಟ್ರಾಫಿಕ್ ಕಮಿಷನರ್