ಬೆಂಗಳೂರು: ಪೊಲೀಸ್ ಇಲಾಖೆ ಮತ್ತು ಇಂಟಲಿಜೆನ್ಸ್ ಇಂದು ದಿಢೀರ್ನೆ ಕೆಪಿಸಿಸಿ ಕಚೇರಿ ಪರಿಶೀಲನೆ ನಡೆಸಿದೆ. ಈ ಪರಿಶೀಲನೆ ಸೆಕ್ಯೂರಿಟಿ ವಿಚಾರವಾಗಿ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಹೇಳಿದ್ದಾರೆ.
ಅಧಿಕಾರಿಗಳ ದಿಢೀರ್ ಪರಿಶೀಲನೆ ವಿಚಾರ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿd ಅವರು, ಚುನಾವಣಾ ಸಮಯವಾದ್ದರಿಂದ ಅಧಿಕಾರಿಗಳು ಭದ್ರತಾ ತಪಾಸಣೆ ಮಾಡಿದ್ದಾರೆ. ಎಸ್ಪಿ, ಇಂಟಲಿಜೆನ್ಸ್, ಎಸಿಪಿ ಕೂಡ ಕಚೇರಿಗೆ ಬಂದಿದ್ರು. ಭದ್ರತೆ ವಿಚಾರವಾಗಿ ಕೆಲವು ಸಲಹೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಕಚೇರಿಯಲ್ಲಿ ಮೆಟಲ್ ಡಿಟೆಕ್ಟರ್ ಇಡಿ, ಮಿರರ್ ಅಳವಡಿಸಿ ಎಂದು ಸಲಹೆ ನೀಡಿದ್ದಾರೆ. ಸಿಬ್ಬಂದಿ ಕುರಿತು ಪೊಲೀಸ್ ಪರಿಶೀಲನೆ ಆಗಬೇಕು. ಅಲ್ಲದೆ ಭದ್ರತೆ ಹೆಚ್ಚಿಸಿಕೊಳ್ಳಿ ಎಂದೂ ಸಲಹೆ ನೀಡಿದ್ದಾರೆ ಎಂದು ವಿವರಿಸಿದರು.
ಅಧಿಕಾರಿಗಳು ಹೀಗೆ ಎಲ್ಲ ಪಕ್ಷಗಳ ಕಚೇರಿಗಳಿಗೂ ಹೋಗ್ತಾರೆ. ಇದು ದೈನಂದಿನ ಪರಿಶೀಲನೆ ಅಷ್ಟೇ. ಜೆಡಿಎಸ್, ಬಿಜೆಪಿ ಕಚೇರಿಗಳಲ್ಲೂ ಪರಿಶೀಲನೆ ಮಾಡ್ತಾರೆ. ಚುನಾವಣೆ ಸಂದರ್ಭದಲ್ಲಿ ಸೆಕ್ಯೂರಿಟಿ ಚೆಕ್ಕಿಂಗ್ ಮಾಡುವುದು ಸಾಮಾನ್ಯ. ಕಚೇರಿಗೆ ಹಲವರು ಬಂದು ಹೋಗ್ತಾರೆ. ಹೀಗಾಗಿ ಅನಾಹುತಗಳು ನಡೆಯಬಹುದೆಂಬ ಅನುಮಾನ ಅಧಿಕಾರಿಗಳದ್ದು. ಅದಕ್ಕೆ ಪರಿಶೀಲನೆ ನಡೆಸಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಇದು ಯಾವುದೇ ರೀತಿಯ ದಾಳಿ ಅಲ್ಲವೆಂದು ರಾಥೋಡ್ ಸ್ಪಷ್ಟಪಡಿಸಿದರು.