ಬೆಂಗಳೂರು: ಆನ್ಲೈನ್ ಮೂಲಕ ಮಾರಾಟಗಾರರು ಗ್ರಾಹಕರಿಗೆ ವಂಚನೆ ಮಾಡಿದರೆ ಅದಕ್ಕೆ ವಹಿವಾಟು ವೇದಿಕೆ ಕಲ್ಪಿಸಿದ ಇ-ಕಾಮರ್ಸ್ ಸಂಸ್ಥೆಗಳು ಜವಾಬ್ದಾರರಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸ್ನ್ಯಾಪ್ ಡೀಲ್ ಸಂಸ್ಥೆ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವ ವೇಳೆ ನ್ಯಾ. ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಸ್ನ್ಯಾಪ್ ಡೀಲ್ ಸಂಸ್ಥೆಯ ವೆಬ್ಸೈಟ್ನಲ್ಲಿ ಜಾಹೀರಾತು ಪ್ರದರ್ಶಿಸಿದ್ದ ಉತ್ಪನ್ನವೊಂದು ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಗೆ ವಿರುದ್ಧವಾಗಿದೆ ಎಂದು ಆರೋಪಿಸಿ ಮೈಸೂರಿನ ಉಪ ಔಷಧ ನಿಯಂತ್ರಕರು ಸಂಸ್ಥೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ವೇಳೆ ಸ್ನ್ಯಾಪ್ ಡೀಲ್ ಪರ ವಾದಿಸಿದ್ದ ಹಿರಿಯ ವಕೀಲರು, ಇ ಕಾಮರ್ಸ್ ಸಂಸ್ಥೆಯಾಗಿರುವ ಸ್ನ್ಯಾಪ್ ಡೀಲ್ ಗ್ರಾಹಕರು ಮತ್ತು ಮಾರಾಟಗಾರರ ನಡುವೆ ಮಧ್ಯವರ್ತಿಯಾಗಿ ಅಷ್ಟೇ ಕೆಲಸ ಮಾಡುತ್ತಿದೆ. ಹೀಗಾಗಿ ಸಂಸ್ಥೆಯು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79ರ ಪ್ರಕಾರ ಹೊಣೆಗಾರಿಕೆಯಿಂದ ವಿನಾಯಿತಿ ಪಡೆಯಲು ಅರ್ಹವಾಗಿದೆ ಎಂದಿದ್ದರು.
ವಾದ ಪುರಸ್ಕರಿಸಿರುವ ಪೀಠ, ವೆಬ್ಸೈಟ್ ಮೂಲಕ ಮಾರಾಟವಾಗುವ ಎಲ್ಲಾ ಉತ್ಪನ್ನಗಳ ಬಗ್ಗೆ ಇ ಕಾಮರ್ಸ್ ಸಂಸ್ಥೆ ತಿಳಿದಿರಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಪ್ರಕರಣ ರದ್ದುಪಡಿಸಿ ಆದೇಶಿಸಿದೆ.