ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಡಿ ಕೆ ಶಿವಕುಮಾರ್ ಕೂರುವುದು ಸಾಮಾನ್ಯ ಪ್ಲಾಸ್ಟಿಕ್ ಚೇರ್ ಮೇಲೆ.. ಅರೇ ಯಾಕೆ ಹೀಗೆ ಅಂತೀರಾ.. ಅದಕ್ಕೆ ಕಾರಣವೇ ಅವರಿಗೆ ಕಾಡ್ತಿರುವ ವಿಪರೀತ ಬೆನ್ನು ನೋವಿನ ಸಮಸ್ಯೆ.
ಮಾರ್ಚ್ 20ಕ್ಕೆ ಕೆಪಿಸಿಸಿ ಅಧ್ಯಕ್ಷರಾದ ದಿನದಿಂದಲೂ ನಿರಂತರ ಪ್ರವಾಸ ಹಾಗೂ ಚಟುವಟಿಕೆಯಲ್ಲಿ ತೊಡಗಿರುವುದರಿಂದಾಗಿ ಡಿಕೆಶಿ ಅವರು ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಇದೇ ಸಮಸ್ಯೆಗೆ ಆಗಾಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದ್ದಿಗೋಷ್ಠಿ ಅಥವಾ ಇನ್ನಿತರ ಸಭೆ ನಡೆಸಲು ಕೆಪಿಸಿಸಿ ಕಚೇರಿಗೆ ಬಂದ ಸಂದರ್ಭದಲ್ಲಿ ಅವರು ಪ್ಲಾಸ್ಟಿಕ್ ಚೇರ್ ಮೊರೆ ಹೋಗ್ತಾರೆ. ಕಳೆದ ವಾರ ನಡೆದ ಸುದ್ದಿಗೋಷ್ಠಿ ವೇಳೆ, ವಿಪರೀತ ಬೆನ್ನು ನೋವು ಕಾಡುತ್ತಿದೆ. ಹೀಗಾಗಿ ಪ್ಲಾಸ್ಟಿಕ್ ಚೇರ್ ಮೇಲೆ ಕೋರುತ್ತಿದ್ದೇನೆ ಎಂದು ಮಾಧ್ಯಮಗಳ ಜತೆಗೆ ಹಂಚಿಕೊಂಡರು.
ಓಡಾಟ ಹಾಗೂ ವಿವಿಧ ಸಮುದಾಯದ ಮುಖಂಡರು ಹಾಗೂ ಮಠಾಧಿಪತಿಗಳನ್ನು ಭೇಟಿಯಾಗುತ್ತಿರುವ ಶಿವಕುಮಾರ್, ಸರ್ಕಾರದ ವಿರುದ್ಧ ನಡೆದ ಹಲವು ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಕೋವಿಡ್-19 ಹಿನ್ನೆಲೆ ಪಕ್ಷದ ಮುಖಂಡರು ತಮ್ಮ ವ್ಯಾಪ್ತಿಯಲ್ಲಿ ಬಡವರು ಹಾಗೂ ಕಾರ್ಮಿಕರಿಗೆ ಆಹಾರ ಸಾಮಗ್ರಿ, ತರಕಾರಿ,ಹಣ್ಣು-ಹಂಪಲುಗಳನ್ನು ವಿತರಿಸಿದ್ದರು. ವಿಶ್ರಾಂತಿ ರಹಿತ ಕಾರ್ಯನಿರ್ವಹಣೆ ಇವರ ಬೆನ್ನುನೋವಿಗೆ ಕಾರಣವಾಗ್ತಿದೆ.
ನಿರ್ಲಕ್ಷ್ಯ ಒಳ್ಳೆಯದಲ್ಲ : ಬೆನ್ನು ನೋವಿನಲ್ಲಿ ಹಲವು ವಿಧಗಳಿವೆ. ನಿರಂತರ ಹೋರಾಟ, ವಿಶ್ರಾಂತಿ ಪಡೆಯದೆ ಇರುವುದರಿಂದಲೂ ಬೆನ್ನು ನೋವು ಕಾಡಬಹುದು. ಇದಲ್ಲದೆ ವಯೋಸಹಜ ಸಮಸ್ಯೆ, ಗ್ಯಾಸ್ಟ್ರಿಕ್, ಹಳೆಯ ನೋವು ಕೆಣಕುವುದು, ಆರ್ಥರೈಟಿಸ್ ಸಮಸ್ಯೆಗಳೂ ಕಾರಣವಾಗಬಹುದು. ಸಕಾಲಕ್ಕೆ ಚಿಕಿತ್ಸೆ ಹಾಗೂ ವಿಶ್ರಾಂತಿ ಪಡೆಯುವುದರಿಂದ ಇದಕ್ಕೆ ಸೂಕ್ತ ಪರಿಹಾರ ಸಾಧ್ಯ ಎನ್ನುತ್ತಾರೆ ಮೂಳೆ ತಜ್ಞ ಡಾ. ಕೇಶವ್ ಪ್ರಸಾದ್.
ಸದ್ಯ ಪದಗ್ರಹಣ ಸಮಾರಂಭದ ತರಾತುರಿಯಲ್ಲಿ ಓಡಾಡುತ್ತಿರುವ ಶಿವಕುಮಾರ್ ಅವರು, ಇದರ ನಡುವೆ ಪುತ್ರಿಯ ನಿಶ್ಚಿತಾರ್ಥವನ್ನೂ ಹರಿಬಿರಿಯಲ್ಲಿ ನೆರವೇರಿಸಿದ್ದಾರೆ. ವಿಧಾನ ಪರಿಷತ್ ಆಕಾಂಕ್ಷಿಗಳ ಮನವೊಲಿಸುವ ಜೊತೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ನಡೆಯುವ ಹಲವು ಸಭೆಗಳಲ್ಲೂ ಪಾಲ್ಗೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಅವರ ಕಾರ್ಯನಿರ್ವಹಣೆ ಇನ್ನಷ್ಟು ಹೆಚ್ಚಳವಾಗಲಿದೆ. ಪಕ್ಷದ ಸಂಘಟನೆ ಎಂಬ ಬೆನ್ನು ಮೂಳೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ತಿರೋ ಡಿಕೆಶಿ ತಮ್ಮ ಬೆನ್ನು ನೋವಿನ ಸಮಸ್ಯೆಗೂ ಏಕ ಕಾಲದಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ.