ಬೆಂಗಳೂರು: ರಾಜಧಾನಿಯ ಹೊರವಲಯದ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ (ಐಐಹೆಚ್ಆರ್) ನಿರ್ದೇಶಕ ಹಾಗೂ ತೋಟಗಾರಿಕೆ ಬೆಳೆಗಳ ಸಂಶೋಧನೆಯಲ್ಲಿ ಅವಿರತ ಸಾಧನೆಗೈದ, ಕನ್ನಡಿಗ, ವಿಜ್ಞಾನಿ ಡಾ. ಎಂ. ಆರ್. ದಿನೇಶ್ ಸೇವೆಯಿಂದ ನಿವೃತ್ತಿ ಹೊಂದಿದರು.
ಡಾ. ದಿನೇಶ್ ಅವರು ಐಐಹೆಚ್ಆರ್ ನಿರ್ದೇಶಕ ಹುದ್ದೆಗೇರಿದ ಮೊದಲ ಕನ್ನಡಿಗ ವಿಜ್ಞಾನಿಯಾಗಿದ್ದಾರೆ. ಐದೂವರೆ ವರ್ಷಗಳ ಹಿಂದೆ ನಿರ್ದೇಶಕರಾಗಿ ನೇಮಕಗೊಂಡ ದಿನೇಶ್, ಸಂಸ್ಥೆಯಲ್ಲಿ ಹಲವು ಪ್ರಥಮಗಳಿಗೆ ಕಾರಣರಾಗಿದ್ದರು. ಸತತ ಐದು ವರ್ಷಗಳಿಂದ ರಾಷ್ಟ್ರೀಯ ತೋಟಗಾರಿಕೆ ಮೇಳ ಆಯೋಜಿಸಿ, ತೋಟಗಾರಿಕೆ ಕ್ಷೇತ್ರದಲ್ಲಿ ತಂತ್ರಜ್ಞಾನ ಅಭಿವೃದ್ದಿ, ಹೊಸ ತಳಿಗಳ ಸಂಶೋಧನೆ, ಹೊಸ ಬೆಳೆಗಳನ್ನು ಪರಿಚಯಿಸಿ ರೈತರ ಪ್ರತ್ಯಕ್ಷ ಹಾಗೂ ಪರೋಕ್ಷ ಬೆಳವಣಿಗೆಗೆ ಕಾರಣರಾಗಿದ್ದರು.
ತೋಟಗಾರಿಕೆ ವಿಜ್ಞಾನಿಯಾಗಿರುವ ದಿನೇಶ್ ಸಂಸ್ಥೆಯ ಚುಕ್ಕಾಣಿ ಹಿಡಿದು, 310 ಕ್ಕೂ ಹೆಚ್ಚು ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸಿದರು. ಹೊಸ ತಳಿಗಳ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿ ಅದನ್ನು ರೈತರಿಗೆ ಪರಿಚಯಿಸಿ ಅವರ ಆದಾಯ ದ್ವಿಗುಣಕ್ಕೆ ಪರೋಕ್ಷ ಕಾರಣಕರ್ತರಾಗಿದ್ದರು.
ಬೆಂಗಳೂರು ಕೃಷಿ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು, ಐಐಹೆಚ್ಆರ್ಗೆ ಯುವ ವಿಜ್ಞಾನಿಯಾಗಿ ಸೇರಿ, ಸುಮಾರು 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದ ದಿನೇಶ್, ಹಣ್ಣಿನ ಬೆಳೆ ವಿಜ್ಞಾನಿಯಾಗಿ ಸಂಸ್ಥೆಯಲ್ಲಿ ಹಲವು ಸಾಧನೆ ಗೈದಿದ್ದರು. ಮಾವು, ಸೀಬೆ, ಪಪ್ಪಾಯ ಬೆಳೆಗಳ 8 ಹೊಸ ತಳಿಗಳ ಅಭಿವೃದ್ದಿ ಪಡಿಸಿರುವ ಸಾಧನೆಯಾಗಿದೆ. ಹೊಸ ತಂತ್ರಜ್ಞಾನಗಳ ಲೈಸನ್ಸೀಕರಣವಲ್ಲದೆ, ರೈತರಿಗೆ ತರಬೇತಿ, ಪ್ರಾತ್ಯಕ್ಷಿಕೆ, ರೈತರಿಗೆ ಹೊಸ ತಂತ್ರಜ್ಞಾನಗಳ ಕುರಿತು ಅಗತ್ಯ ಮಾಹಿತಿ, ಕೃಷಿ ಸಂವಾದಗಳು, ಬೀಜಗ್ರಾಮ, ಟೆರೆಸ್ ಗಾರ್ಡನಿಂಗ್ , ಸೀಡ್ ಪೋರ್ಟಲ್ ಮುಂತಾದ ಹಲವು ಕಾರ್ಯಕ್ರಮಗಳನ್ನು ದಿನೇಶ್ ತಮ್ಮ ಅವಧಿಯಲ್ಲಿ ಕಾರ್ಯರೂಪಕ್ಕೆ ತಂದಿದ್ದರು.
ಮುಖ್ಯವಾಗಿ, ಐಐಹೆಚ್ಆರ್ ರೈತರಿಗೆ ಮತ್ತು ಸಾರ್ವಜನಿಕರಿಗೆ ಹೆಚ್ಚು ಹತ್ತಿರವಾಗಿದ್ದು, ಅದು ವಿನೂತನವಾಗಿ ಆಯೋಜಿಸುತ್ತಿದ್ದ ರಾಷ್ಟ್ರೀಯ ತೋಟಗಾರಿಕೆ ಮೇಳ. ದೇಶದ ನಾನಾ ಮೂಲೆಗಳಿಂದ ರೈತರು, ವಿಜ್ಞಾನಿಗಳು, ಸಂಪನ್ಮೂಲ ವ್ಯಕ್ತಿಗಳು, ಕೃಷಿ ತಂತ್ರಜ್ಞರನ್ನು ಒಂದೆಡೆ ಸೇರಿಸುವ ಐದು ದಿನಗಳ ಕಾರ್ಯಕ್ರಮ ದೇಶದ ಗಮನ ಸೆಳೆಯುತ್ತಿತ್ತು. ಈ ಮೇಳದಿಂದ ಉತ್ತೇಜನಗೊಂಡು, ಯುವಕರು ತೋಟಗಾರಿಕೆ ಬೆಳೆ ಕೃಷಿ ಕಡೆ ಒಲವು ತೋರಿಸಿದ್ದರು. ದಿನೇಶ್ ಅವರು ಈ ಕಾರ್ಯಕ್ರಮವನ್ನು ಬಹಳ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದರು.
ಕೋವಿಡ್ ಕಾಲಘಟ್ಟದಲ್ಲಿ ನಡೆದ ವರ್ಚುವಲ್ ಹಾಗೂ ಬೌದ್ಧಿಕ ತೋಟಗಾರಿಕೆ ಮೇಳ ಹೆಚ್ಚು ಗಮನ ಸೆಳೆದು ಯಶಸ್ಸು ಕಂಡಿತ್ತು. ಈ ವರ್ಷದ ಫೆಬ್ರವರಿ ತಿಂಗಳಲ್ಲಿ ನಡೆದ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ 54 ಲಕ್ಷ ಮಂದಿ ಆನ್ ಲೈನ್ ಮೂಲಕ ಭಾಗವಹಿಸಿದ್ದರು. ಹೆಸರಘಟ್ಟದಲ್ಲಿರುವ ಸುಮಾರು 650 ಎಕರೆ ವಿಸ್ತಾರವಾದ ಕೃಷಿ ಭೂಮಿಯನ್ನು ತೋಟಗಾರಿಕೆ ಬೆಳೆಗಳಿಗೆ ಮತ್ತು ಸಂಶೋಧನೆಗೆ ಮೀಸಲಿಟ್ಟು, ರೈತರಿಗೆ ನೇರ ಪ್ರಯೋಜನ ಪಡೆಯಲು ದಿನೇಶ್ ಕಾರಣರಾಗಿದ್ದರು.
ಸಂಸ್ಥೆಯ ಉಪ ಕಚೇರಿಗಳಾದ ಭವನೇಶ್ವರ, ಹಿರೋಹಳ್ಳಿ, ಗೋಣಿಕೊಪ್ಪಲು, ಹಾಗು ಚೆಟ್ಟಳ್ಳಿಗಳನ್ನು ಅಭಿವೃದ್ದಿಪಡಿಸಿ, 740 ಕ್ಕೂ ಹೆಚ್ಚು ಅಧಿಕ ಅಪ್ಪೆ ಮಿಡಿ ಮಾವಿನ ತಳಿಗಳ ಸಂರಕ್ಷಣೆ, ನೇರಳೆ, ನುಗ್ಗೆ, ಸೀಬೆ, ಸಪೋಟಾ ಬೆಳೆ ತಳಿಗಳ ಅಭಿವೃದ್ದಿಗೆ ದಿನೇಶ್ ವಿಶೇಷ ಕೊಡುಗೆ ನೀಡಿದ್ದರು.
ಸೋಮವಾರ ಐಐಹೆಚ್ಆರ್ ಸಂಸ್ಥೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಸ್ಥೆಯ ನೌಕರರು ಮತ್ತು ವಿಜ್ಞಾನಿಗಳು ದಿನೇಶ್ ಅವರಿಗೆ ಬೀಳ್ಕೊಡುಗೆ ನೀಡಿದರು. ಪ್ರಧಾನ ವಿಜ್ಞಾನಿ, ಡಾ. ಬಿ.ಎನ್.ಎಸ್. ಮೂರ್ತಿ ಪ್ರಭಾರ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು ಎಂದು ಐಐಹೆಚ್ಆರ್ನ ಪ್ರಧಾನ ವಿಸ್ತರಣಾ ವಿಜ್ಞಾನಿ ಮತ್ತು ಮಾಧ್ಯಮಗಳ ನೋಡಲ್ ಅಧಿಕಾರಿ ಡಾ. ಬಿ. ನಾರಾಯಣಸ್ವಾಮಿ ತಿಳಿಸಿದರು.
ಇದನ್ನೂ ಓದಿ: ಮಣ್ಣಿನ ಮಗ ದಿಲ್ಲಿ ಗದ್ದುಗೆ ಏರಿ ದೇಶ ಆಳಿದ ಶುಭ ಘಳಿಗೆಗೆ ಈಗ 25 ವರ್ಷ..!