ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ತಗ್ಗುತ್ತಾ ಬರ್ತಿದೆ. ಈ ನಡುವೆ ಮೂರನೇ ಅಲೆಯ ಎಚ್ಚರಿಕೆ ನೀಡಿರುವ ತಜ್ಞರು, ಮಕ್ಕಳೇ ಹೆಚ್ಚು ಟಾರ್ಗೆಟ್ ಆಗುವ ಸಾಧ್ಯತೆಗಳು ಇವೆ ಅಂತ ತಿಳಿಸಿದ್ದಾರೆ. ರಾಜ್ಯಕ್ಕೆ ಮೂರನೇ ಅಲೆ ಬಂದರೆ ತಡೆಯೋದು ಹೇಗೆ..? ಡಾ. ದೇವಿ ಶೆಟ್ಟಿ ನೇತೃತ್ವದ ಸಮಿತಿಯು ಸರ್ಕಾರಕ್ಕೆ ನೀಡಿದ ಶಿಫಾರಸುಗಳಲ್ಲಿ ಏನ್ ಇದೆ ಅನ್ನೋ ಕುತೂಹಲ ಮೂಡುವುದು ಸಹಜ.
ಇಂದು ಸಚಿವ ಸುಧಾಕರ್ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಮೀಟಿಂಗ್ ಇದ್ದು, ಮೂರನೇ ಅಲೆಯ ಕುರಿತು ಚರ್ಚೆ ಆಗಲಿದೆ. ದೇವಿ ಪ್ರಸಾದ್ ಶೆಟ್ಟಿ ವರದಿ ಸಿದ್ಧವಿದ್ದರೆ ಚರ್ಚೆ ನಡೆಸುತ್ತೇವೆ ಅಂತಲೂ ಸಚಿವರು ಮಾಹಿತಿ ನೀಡಿದ್ದಾರೆ. ಅಂದಹಾಗೆ ಒಂದು ವಾರದ ಬಳಿಕ ಅಂತಿಮ ವರದಿ ಸಲ್ಲಿಕೆ ಆಗಲಿದೆ ಅಂತ ಹೇಳಲಾಗಿತ್ತು. ಮೌಖಿಕ ವರದಿ ನೀಡಿರುವ ತಜ್ಞರು, ಮಕ್ಕಳು ಸೂಪರ್ ಸ್ಪ್ರೆಡರ್ಸ್ ಅಲ್ಲ, ಮಕ್ಕಳು ಕೋವಿಡ್ ಕ್ಯಾರಿಯರ್ಸ್ ಆಗಿರುವುದಿಲ್ಲ. ಬದಲಿಗೆ ಮಕ್ಕಳಿಗೆ ಬಂದರೆ ಮನೆಯವರಿಂದಲೇ ಕೊರೊನಾ ಸೋಂಕು ಬರಬಹುದಾದ ಸಾಧ್ಯತೆಯೇ ಹೆಚ್ಚು. ಸದ್ಯ ಮಕ್ಕಳಿಗೆ ಸೋಂಕು ತಗುಲಿದರೂ ಅನಾಹುತ ಸೃಷ್ಟಿ ಮಾಡಿರೋದು ಕಡಿಮೆ, ಮಕ್ಕಳಲ್ಲಿ ಆಗ್ತಿರುವ ಸಾವಿನ ಪ್ರಮಾಣ ಕೂಡ ಕಡಿಮೆ ಇದೆ. ಆದರೂ ಮುಂಜಾಗ್ರತೆ ದೃಷ್ಟಿಯಿಂದ ಒಂದಷ್ಟು ತಯಾರಿಗಳನ್ನ ಮಾಡಿಕೊಳ್ಳಲು ಸಮಿತಿ ಸದಸ್ಯರ ಸಲಹೆ ಬಂದಿದೆ.
ಕೋವಿಡ್ ಮೂರನೇ ಅಲೆಗೆ ಏನೆಲ್ಲ ಮುಂಜಾಗ್ರತೆಯಾಗಿರಬೇಕು?
- ಮೂರನೇ ಅಲೆಯ ಸಿದ್ಧತೆಗಾಗಿ ಕೇಂದ್ರ ಸರ್ಕಾರ ನಿರ್ಧಾರಕ್ಕೆ ಕಾಯದೇ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡು ಮುಂದುವರಿಯಬೇಕು
- ಮಕ್ಕಳ ಕೋವಿಡ್ ಕೇರ್ ಸೆಂಟರ್ ಆರಂಭ ಮಾಡಬೇಕು.
- ಹೋಬಳಿ ಮಟ್ಟದಲ್ಲೇ ಆಸ್ಪತ್ರೆಗಳನ್ನ ಸಿದ್ದ ಇಟ್ಟುಕೊಳ್ಳಬೇಕು.
- ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಮಕ್ಕಳನ್ನ ನೋಡಿಕೊಳ್ಳಲು ಪೋಷಕರು ಜೊತೆಯಲ್ಲಿ ಇರಬೇಕು ಹಾಗೂ ಅವರಿಗೆ ಅನುಕೂಲವಾಗಲು ಎನ್ -95 ಮಾಸ್ಕ್ ನೀಡಲು ಸಕಾಲ ತಯಾರಿ ಇರಬೇಕು- ಮಕ್ಕಳಿಗೆ ಚಿಕಿತ್ಸೆ ನೀಡಲು ಮಕ್ಕಳ ತಜ್ಞರ ಕೊರತೆ ಇದೆ- ರಾಜ್ಯದಲ್ಲಿ ನೋಂದಣಿ ಮಾಡಿಕೊಂಡಿರುವ 3000 ಮಕ್ಕಳ ವೈದ್ಯರು ಮಾತ್ರ ಇದ್ದಾರೆ.
- ರಾಜ್ಯದಲ್ಲಿ 0-18 ವರ್ಷದೊಳಗಿನ 1.75 ಕೋಟಿ ಜನಸಂಖ್ಯೆ ಇದೆ.
- ಸದ್ಯದ ಅನುಪಾತ ನೋಡಿದ್ರೆ 6000 ಮಕ್ಕಳಿಗೆ ಒಬ್ಬ ಮಕ್ಕಳ ವೈದ್ಯರಿದ್ದಾರೆ. 1000 ಮಕ್ಕಳಿಗೆ ಒಬ್ಬರು ಮಕ್ಕಳ ವೈದ್ಯರು ಇರಬೇಕು. ಹೀಗಾಗಿ ಮಕ್ಕಳಿಗೆ ಚಿಕಿತ್ಸೆ ನೀಡುವ ತರಬೇತಿ ಆರಂಭಿಸಬೇಕಿದೆ.
- 7 ದಿನಗಳ ಕ್ರಾಸ್ ಕೋರ್ಸ್ ಆರಂಭಿಸಿ ಇತರ ವೈದ್ಯರನ್ನ ತಯಾರು ಮಾಡಬೇಕಿದೆ.
- ಆಸ್ಪತ್ರೆಗಳಲ್ಲಿರುವ ಆಕ್ಸಿಜನ್ ಬೆಡ್ಗಳನ್ನ ICU ಮಾಡಬೇಕಿದೆ.
- ಸೆಂಟಿನಲ್ ಸರ್ವೇ ಆರಂಭಿಸಲು ಆದೇಶಿಸುವಂತೆ ಸೂಚನೆ ಕೊಡಬೇಕು. ಅಂದರೆ ಜಿಲ್ಲೆಗಳಲ್ಲಿರುವ ಒಂದು ಖಾಸಗಿ, ಒಂದು ಸರ್ಕಾರಿ ಆಸ್ಪತ್ರೆಗೆ ಬರುವ ಮಕ್ಕಳಲ್ಲಿ ಎಷ್ಟು ಜನರಿಗೆ ಸೋಂಕು ತಗುಲುತ್ತಿದೆ ನೋಡಬೇಕು.
- ಮಕ್ಕಳಿಗೆ ಸೋಂಕು ತಗುಲುವುದು ಹಿರಿಯರಿಂದಲೇ.. ಹೀಗಾಗಿ ಪ್ರಾಥಮಿಕ ನಿಯಂತ್ರಣವಾಗಿ ಹಿರಿಯರಿಗೆ ಹೆಚ್ಚೆಚ್ಚು ವ್ಯಾಕ್ಸಿನ್ ಹಾಕಿಸಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.