ಬೆಂಗಳೂರು: ಆಪರೇಶನ್ ಕಮಲದ ವಿಚಾರವಾಗಿ ಏನನ್ನೂ ಮಾತನಾಡಬೇಡಿ ಎಂದು ಪಕ್ಷದ ಅನರ್ಹ ಶಾಸಕರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜೊತೆಗೆ ಸ್ವಪಕ್ಷೀಯ ಶಾಸಕರಿಗೂ ಕಿವಿ ಮಾತು ಹೇಳಿದ್ದಾರೆ.
ಆಪರೇಷನ್ ಕಮಲದ ಬಗ್ಗೆ ಮಾತನಾಡಿದರೆ ಉಪಚುನಾವಣೆ ಹೊತ್ತಿನಲ್ಲಿ ಜನರಿಗೆ ಮತ್ತಷ್ಟು ತಪ್ಪು ಸಂದೇಶ ಹೋಗಲಿದೆ. ಇದು ಸರ್ಕಾರದ ಮೇಲೂ ಪರಿಣಾಮ ಬೀರಲಿದೆ
ಅಪ್ಪಿ ತಪ್ಪಿಯೂ ಆಪರೇಶನ್ ಕಮಲದ ಬಗ್ಗೆ ಮಾತನಾಡಬೇಡಿ. ಪ್ರತಿಪಕ್ಷಗಳು ಇದನ್ನೇ ನಮ್ಮ ವಿರುದ್ಧ ಪ್ರಚಾರಕ್ಕೆ ಬಳಸಿಕೊಳ್ಳುತ್ತವೆ. ಅಲ್ಲದೇ ರಾಷ್ಟ್ರೀಯ ನಾಯಕರ ಹೆಸರುಗಳನ್ನು ಪ್ರಸ್ತಾಪಿಸಕೂಡದು ಎಂದು ಅನರ್ಹ ಶಾಸಕರಿಗೆ ಸಿಎಂ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ ಅನರ್ಹ ಶಾಸಕರ ಹೇಳಿಕೆಗಳಿಗೆ ಸ್ಪಷ್ಟೀಕರಣದಂತಹ ಹೇಳಿಕೆಯನ್ನು ನೀಡಲು ಹೋಗಬೇಡಿ ಎಂದು ಸೂಚಿಸಿದ್ದಾರೆ ಎಂದು ಸಿಎಂ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ಕಳೆದೆರಡು ದಿನಗಳಿಂದ ರಮೇಶ್ ಜಾರಕಿಹೊಳಿ, ಹೆಚ್.ವಿಶ್ವನಾಥ್ ಸೇರಿದಂತೆ ಕೆಲವರು ಆಪರೇಷನ್ ಕಮಲದ ಘಟನಾವಳಿಗಳನ್ನು ಬಹಿರಂಗವಾಗಿ ವಿವರ ನೀಡಿದ್ದು ಇದರಿಂದ ಪಕ್ಷ ಹಾಗು ಸರ್ಕಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಸಿಎಂ ಈ ಸಂದೇಶವನ್ನು ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.