ದೊಡ್ಡಬಳ್ಳಾಪುರ: ಲಾಕ್ಡೌನ್ ನಿಂದ ಕೈಯಲ್ಲಿ ಬಿಡಿಗಾಸು ಇಲ್ಲದೇ ಈ ವರ್ಷ ಬೇಸಾಯವೇ ಬೇಡವೆಂದು ಕುಳಿತ್ತಿದ್ದ ರೈತನ ಹೊಲದಲ್ಲಿ ಕಳೆದ ವರ್ಷದ ರಾಗಿ ಕೊಯ್ಲು ಸಮಯದಲ್ಲಿ ಉದುರಿದ ರಾಗಿಯಿಂದಲೇ ಈ ವರ್ಷ ಭರ್ಜರಿ ಬೆಳೆ ಬಂದಿದ್ದು, ಸಂಕಷ್ಟದಲ್ಲಿದ್ದ ರೈತನ ಮೊಗದಲ್ಲಿ ಖುಷಿ ಮೂಡಿಸಿದೆ.
ತಾಲೂಕಿನ ತಿಮ್ಮಸಂದ್ರ ಗ್ರಾಮದ ರೈತ ಚಿಕ್ಕಮುನಿಯಪ್ಪ ಎಂಬುವವರ ಎರಡು ಎಕರೆ ಹೊಲದಲ್ಲಿ ಇಂತಹ ಅಚ್ಚರಿಯೊಂದು ನಡೆದಿದ್ದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಉಳುಮೆ ಮಾಡಿ, ಗೊಬ್ಬರ ಹಾಕಿ, ಕಾಲ ಕಾಲಕ್ಕೆ ಕಳೆ ಕಿತ್ತರೂ ಉತ್ತಮ ರಾಗಿ ಬೆಳೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಈ ಬಾರಿ ಉತ್ತದೇ ಬಿತ್ತದೇ ತನ್ನಷ್ಟಕ್ಕೆ ತಾನೆ ಉತ್ತಮ ರಾಗಿ ಬೆಳೆದು ರೈತನ ಮೊಗದಲ್ಲಿ ಮಂದಹಾಸ ತಂದಿದೆ.
ಮೇವು ಸಿಗುತ್ತೆ ಅಂದುಕೊಂಡ್ವಿ.. ಭೂತಾಯಿ ಬೆಳೆಯನ್ನೇ ಕೊಟ್ಟಿದ್ದಾಳೆ.
ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ಕಳೆದ ವರ್ಷ ಕಟಾವಿನಲ್ಲಿ ಉದುರಿದ್ದ ರಾಗಿಯೇ ಹೊಲದ ತುಂಬಾ ಮೊಳಕೆ ಒಡೆದಿತ್ತು. ಬಿತ್ತನೆಗೆ ಎಂದು ಒಂದು ಬಾರಿ ಉಳುಮೆ ಮಾಡಿದ್ದೆ. ಆನಂತರವೂ ರಾಗಿ ಮೊಳಕೆ ಒಡೆಯಿತು. ಆದ್ರೆ ಮತ್ತೊಮ್ಮೆ ಉಳುಮೆ ಮಾಡಿ ಬಿತ್ತನೆ ಮಾಡಲು ಸಾಲ ಮಾಡುವ ಪರಿಸ್ಥಿತಿಯೂ ಇತ್ತು. ಅದಕ್ಕೆ ಮೊಳಕೆ ಬಂದ ಪೈರುಗಳನ್ನ ಹಾಗೆಯೇ ಉಳಿಸಿಕೊಂಡು, ರಾಸುಗಳಿಗೆ ಹುಲ್ಲಾದರೂ ಆಗಲಿ ಎಂದು ಹಾಗೆಯೇ ಬಿಟ್ಟಿದ್ದೆ. ಆದ್ರೆ ಭೂತಾಯಿ ಉತ್ತಮ ಫಸಲು ನೀಡಿದ್ದಾಳೆ. ನನ್ನ ಜೀವಮಾನದಲ್ಲಿ ಈ ರೀತಿ ಬೆಳೆ ಬಂದಿರುವುದನ್ನ ನೋಡಿರಲಿಲ್ಲ. ಇಂತಹ ಬೆಳೆ ಬರುತ್ತದೆ ಎಂದು ನಾನು ಕನಸಲ್ಲೂ ಎಣಿಸಿರಲಿಲ್ಲ ಎಂದು ರೈತ ಚಿಕ್ಕಮುನಿಯಪ್ಪ ಆಶ್ಜರ್ಯ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಬಡ ರೈತರ ನೆರವಿಗೆ ಧಾವಿಸಲಿ.
ಪ್ರಕೃತಿ ಸಹಜವಾಗಿ ಬಂದಿರುವ ಬೆಳೆ ಸಂತಸ ತಂದಿದೆ. ರೈತನ ಬಂಡವಾಳವನ್ನು ಉಳಿಸಿರುವುದು ಮತ್ತೊಂದು ಸಂತೋಷದ ಸಂಗಂತಿ. ಆದರೆ ಚಿಕ್ಕಮುನಿಯಪ್ಪನಿಗೆ ಸೇರಿದ ಭೂಮಿ ಸೇರಿದಂತೆ ತಿಮ್ಮಸಂದ್ರದ 10.33 ಎಕರೆ ಭೂಮಿಯಲ್ಲಿ ಸುಮಾರು 13 ಮಂದಿ ದಲಿತರು ಕಳೆದ 30 ವರ್ಷಗಳಿಂದ ಕೃಷಿ ಮಾಡುತ್ತಾ ಬಂದಿದ್ದೇವೆ.
ಈ ಭೂಮಿ ಇಂದಿಗೂ ಸರ್ಕಾರಿ ಪಾಳು ಅಂತಲೇ ಕಂದಾಯ ಇಲಾಖೆಯಲ್ಲಿ ನಮೂದಿಸಲಾಗಿದೆ. ಈ ಕುರಿತು ಬಗರ್ ಹುಕ್ಕುಂ ಯೋಜನೆಯಡಿ ಅರ್ಜಿ ಸಲ್ಲಿಸಿದ್ದೇವೆ. ಆದರೂ ಈವರೆಗೆ ಭೂಮಿ ಮಂಜೂರಾಗಿಲ್ಲ. ಬಹುತೇಕ ದಲಿತ ಕುಟುಂಬಗಳಿಗೆ ಇದೇ ಜೀವನಾಧರವಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ನಮ್ಮ ಅನ್ನದಾತನ ನೆರವಿಗೆ ಬರಬೇಕಿದೆ ಎಂದು ಇಲ್ಲಿನ ವಿಎಸ್ಎಸ್ಎನ್ ಉಪಾಧ್ಯಕ್ಷ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.