ದೊಡ್ಡಬಳ್ಳಾಪುರ : ಕೋವಿಡ್-19 ಹಿನ್ನೆಲೆ ಲಾಕ್ಡೌನ್ ಆದೇಶ ಜಾರಿಗೊಳಿಸಿರುವುದರಿಂದ ಫೈನ್ ಆರ್ಟ್ಸ್ ಕಾಲವಿದನೊಬ್ಬ ಅಂಗಡಿ ಬಾಗಿಲು ಬಂದ್ ಮಾಡಿ ಮನೆಯಲ್ಲೇ ಕುಳಿತಿದ್ದ. ಆದ್ರೆ ಇದೀಗ ಕೊರೊನಾ ಜಾಗೃತಿ ಮೂಡಿಸುವ ಮೂಲಕ ಮತ್ತೆ ಹೊಸ ಉದ್ಯೋಗ ಕಂಡುಕೊಂಡಿದ್ದು ಕೊರೊನಾ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಪ್ರಪಂಚದಾದ್ಯಂತ ಅವರಿಸಿರುವ ಕೊರೊನಾ ವೈರಸ್ ಪ್ರತಿಯೊಬ್ಬರ ಜೀವನ, ಉದ್ಯೋಗ, ಸಂಬಂಧಗಳ ಮೇಲೆ ಪರಿಣಾಮ ಬೀರಿದೆ. ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಿದ್ದು, ಇದರಿಂದ ಸಾಕಷ್ಟು ಜನ ಉದ್ಯೋಗ ಕಳೆದುಕೊಂಡಿದ್ದಾರೆ.
ನೆಲಮಂಗಲ ತಾಲೂಕಿನ ಲಕ್ಕೇನಹಳ್ಳಿ ಹನುಮಂತರಾಜು ಫೈನ್ ಆರ್ಟ್ಸ್ ಕಲಾವಿದ. ಇವರು ಗೋಡೆ ಬರಹ, ನಾಮಫಲಕ ಬರೆಯುವ ಮೂಲಕ ಜೀವನ ನಡೆಸುತ್ತಿದ್ದರು. ಆದರೆ, ಕೊರೊನಾ ದೆಸೆಯಿಂದ ಅಂಗಡಿ ಬಾಗಿಲು ಮುಚ್ಚಿ ಕೆಲಸವಿಲ್ಲದೇ ಸುಮ್ಮನೆ ಮನೆಯಲ್ಲೇ ಕೂರ ಬೇಕಾಯ್ತು. ಈ ಸಮಯದಲ್ಲಿ ಕೊರೊನಾ ಜಾಗೃತಿ ಬರಹಗಳನ್ನು ಬರೆಯುವ ಮೂಲಕ ಹನುಮಂತರಾಜು ಮತ್ತೆ ದುಡಿಮೆಯ ದಾರಿ ಕಂಡು ಕೊಂಡಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆಗಳ ಮೇಲೆ ಕೊರೊನಾ ಕುರಿತು ಜಾಗೃತಿ ಬರಹಗಳನ್ನು ಬರೆಯುವ ಮೂಲಕ ಗ್ರಾಮಸ್ಥರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಜಾಗೃತಿ ಬರಹಕ್ಕೆ ಒಂದು ಸಾವಿರ ರೂ. ಪಡೆಯುವ ಮೂಲಕ ಲಾಕ್ಡೌನ್ ನಲ್ಲೂ ದುಡಿಮೆ ಮಾಡಿ ಸಂಸಾರ ನಿರ್ವಹಣೆ ಮಾಡುತ್ತಿದ್ದಾರೆ. ಪೊಲೀಸ್, ವೈದ್ಯರಂತೆ ತಾವೂ ಸಹ ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವುದು ಹೆಮ್ಮೆ ಎಂದು ಹನುಮಂತರಾಜು ಸಂತಸ ವ್ಯಕ್ತಪಡಿಸಿದ್ದಾರೆ.