ಬೆಂಗಳೂರು: ತಮ್ಮ ಸಿದ್ಧಾಂತ ಒಪ್ಪಿಲ್ಲ ಅಂದರೆ ಅವರಿಗೆ ದೇಶದ್ರೋಹಿ, ದೇಶ ವಿರೋಧಿ ಪಟ್ಟ ಕಟ್ಟಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಸದನದಲ್ಲಿ ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ವಿಧಾನಸಭೆಯಲ್ಲಿ ಸಂವಿಧಾನದ ಮೇಲಿನ ವಿಶೇಷ ಚರ್ಚೆ ವೇಳೆ ಮಾತನಾಡಿದ ಅವರು, ಸಿಎಎ ಸಂವಿಧಾನ ಬಾಹಿರವಾಗಿದೆ. ದೇಶದಲ್ಲಿ 25,000ಕ್ಕೂ ಹೆಚ್ಚು ಜಾತಿಗಳಿವೆ. ಇಷ್ಟು ವಿಭಿನ್ನತೆ ಇದ್ದರೂ ನಮ್ಮ ದೇಶ ಸಶಕ್ತವಾಗುತ್ತಿರುವುದು ಭಗವದ್ಗೀತೆ, ಕುರಾನ್, ಬೈಬಲ್ನಿಂದ ಅಲ್ಲ. ಅದು ಸದೃಢ, ಸಶಕ್ತವಾಗಿರಲು ಕಾರಣ ಸಂವಿಧಾನ. ಆದರೆ ಸಂವಿಧಾನದ ಬಗ್ಗೆ, ಅಂಬೇಡ್ಕರ್ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ಸಂವಿಧಾನದ ವಿರುದ್ಧ ಮಾತನಾಡಿರುವವರು ಎಲ್ಲರೂ ಒಂದೇ ಸಂಘದಿಂದ ಬಂದಿರುವವರು. ಕೆಲವರು ಸಂವಿಧಾನದ ವಿರುದ್ಧ ಮಾತನಾಡುತ್ತಾರೆ. ಆದರೆ ನನಗೆ ಅನಿಸುವ ಪ್ರಕಾರ ಅದರಲ್ಲಿ ಅವರದ್ದೇನೂ ತಪ್ಪಿಲ್ಲ. ಏಕೆಂದರೆ ಹಿಂದಿನಿಂದಲೂ ಕೆಲ ಸಂಘ ಸಂಸ್ಥೆಗಳ ಪ್ರಮುಖರು ಸಂವಿಧಾನ ವಿರುದ್ಧ ಮಾತನಾಡುತ್ತಾ ಬರುತ್ತಿದ್ದಾರೆ. ಸಂವಿಧಾನ ವಿರೋಧಿಸುತ್ತಿರುವವರು ಪ್ರಭಾವಿಗಳು. ಸಂಘಟನೆಗೆ ಸೇರಿದ ಪ್ರಮುಖರಾಗಿದ್ದಾರೆ ಎಂದು ಕಿಡಿಕಾರಿದರು.
ಯಾರೂ ದೇಶದ ಐಕ್ಯತೆ, ಸಮಾನತೆ ಇಷ್ಟ ಪಡಲ್ಲ. ಯಾರು ಸಮಾಜದಲ್ಲಿ ಜಾತಿ ವ್ಯವಸ್ಥೆಯನ್ನು ತರುತ್ತಿದ್ದಾರೆ, ಧರ್ಮ ರಾಜಕಾರಣ ಮಾಡುತ್ತಾರೆ ಅವರು ದೇಶ ವಿರೋಧಿಗಳು ಎಂದು ಅಂಬೇಡ್ಕರ್ ಹೇಳಿದ್ದರು ಎಂದು ಸ್ಮರಿಸಿದರು.