ಬೆಂಗಳೂರು: ಬೇರೆ ವೈರಸ್ಗಳಿಗೆ ಹೋಲಿಸಿದರೆ ಕೊರೊನಾ ಬಹು ಬೇಗನೆ ಹರಡುವ ಕಾರಣ ಎಲ್ಲರಲ್ಲೂ ಭೀತಿ ಹೆಚ್ಚಿಸಿದೆ. ದಿನೇ ದಿನೆ ಸೋಂಕಿತರೂ ಹೆಚ್ಚಾಗುತ್ತಿದ್ದಾರೆ. ಇಂತಹ ಆತಂಕದ ಸ್ಥಿತಿಯಲ್ಲಿ ಸೋಂಕಿತರಿಗೆ ವೈದ್ಯರು ಬಿ ಪಾಸಿಟಿವ್ ಎನ್ನುತ್ತಿದ್ದಾರೆ!
ನಗರದ ಜಿಕೆವಿಕೆಯನ್ನು ಕೋವಿಡ್ ಕೇರ್ ಕೇಂದ್ರವನ್ನಾಗಿ (ಆರೈಕೆ ಕೇಂದ್ರ) ಪರಿವರ್ತಿಸಿದ್ದು, ಪಾಸಿಟಿವ್ ಇರುವವರಿಗೆ ಅಲ್ಲಿನ ವೈದ್ಯರೇ ಪಾಸಿಟಿವ್ ಎನರ್ಜಿ ಆಗಿದ್ದಾರೆ. ಹಾಗಿದ್ದರೆ ಇಲ್ಲಿ ಆರೈಕೆ ಹೇಗಿರುತ್ತದೆ? ಸೋಂಕಿತರಿಗೆ ಏನೆಲ್ಲಾ ಮಾಡಿಸಲಾಗುತ್ತದೆ? ಮಾನಸಿಕ ಧೈರ್ಯವನ್ನು ಹೆಚ್ಚಿಸುವಲ್ಲಿ ವೈದ್ಯರ ಪಾತ್ರವೇನು? ಎಂಬುದನ್ನು ಈಟಿವಿ ಭಾರತ ತೋರಿಸುತ್ತಿದೆ.
ಸೋಂಕಿಗೆ ಒಳಗಾದ ವ್ಯಕ್ತಿ ಆರೈಕೆ ಕೇಂದ್ರದಲ್ಲಿ 10 ದಿನ ಇರಲೇಬೇಕು. ವೈದ್ಯರು ಬೆಳಗ್ಗೆ-ಸಂಜೆ ಎರಡು ಸಲ ತಪಾಸಣೆ ಮಾಡುತ್ತಿದ್ದಾರೆ. ಹಾಗೆಯೇ ಯೋಗಾಭ್ಯಾಸ, ವಾಕಿಂಗ್ ಮಾಡಿಸುತ್ತಾರೆ. ಹೊಸದಾಗಿ ಬರುವ ಸೋಂಕಿತರಲ್ಲಿ ಆತಂಕ ಇರುತ್ತದೆ. ಹೀಗಾಗಿ ಅವರಿಗಾಗಿ ಗ್ರೂಪ್ ಥೆರಪಿ ಮಾಡಲಾಗುತ್ತದೆ. ಈಗಾಗಲೇ ಬಂದಿರುವ ಸೋಂಕಿತರ ಜೊತೆಗೂಡಿ ಧೈರ್ಯ ಹೆಚ್ಚಿಸುವ ಕೆಲಸ ಮಾಡಲಾಗುತ್ತದೆ. ಅವರು ನಮಗೆ ಉತ್ತಮ ಸ್ನೇಹಿತರೂ ಆಗಿದ್ದಾರೆ ಎನ್ನುತ್ತಾರೆ ಡಾ. ನಿತಿನ್.
ನೆಗಡಿ-ಗಂಟಲು ಕಿರಿಕಿರಿಗೂ ಭಯ ಪಡುವ ಅಗತ್ಯವಿಲ್ಲ: ನರ್ಸ್
ಹೋರಗಿನಿಂದ ಬಂದ ತಕ್ಷಣ ಕೈಗಳನ್ನು ಸ್ವಚ್ಛಗೊಳಿಸಿ. ಸಣ್ಣ ನೆಗಡಿ-ಗಂಟಲು ನೋವಾದರೂ ಕೊರೊನಾ ಬಂದಿದೆ ಎಂದು ಭಯ ಪಡುವುದು ಬೇಡ. ಬಿಸಿ ನೀರಿನ ಸ್ನಾನ ಮಾಡಿ. ದಿನದಲ್ಲಿ ಮೂರು ಬಾರಿ ಬಿಸಿ ನೀರಿನ ಹಬೆ ತೆಗೆದುಕೊಳ್ಳುವುದು. ಉಪ್ಪು ನೀರಿನಲ್ಲಿ ಮೂರು ಬಾರಿ ಗಾಗಲ್ ಮಾಡಬೇಕು ಎಂದು ನರ್ಸ್ ಏಂಜಲಿನ್ ಜೆಸ್ಸಿ ಸಲಹೆ ನೀಡಿದರು. ಬಿಸಿ ನೀರಿಗೆ ಅರಿಶಿಣ, ಕರಿಮೆಣಸಿನ ಪುಡಿ, ಒಣ ಶುಂಠಿ ಹಾಕಿ ಕಷಾಯ ತಯಾರಿಸಿ ದಿನದಲ್ಲಿ ಒಮ್ಮೆ ಕುಡಿಯುವಂತೆ ಹೇಳಿದರು. ಎಲ್ಲರೂ ಒಂದೂಗೂಡಿ ಕೊರೊನಾ ವೈರಸ್ ಭೀತಿಯನ್ನು ದೂರ ಮಾಡಬೇಕಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಜಾಗೃತಿ ಮೂಡಿಸಬೇಕಿದೆ.