ಬೆಂಗಳೂರು: ದೇಶದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿ ಎಂಬ ಉದ್ದೇಶದಿಂದ ಭಾರತ್ ಜೋಡೋ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕರ್ನಾಟಕದಲ್ಲಿ 511 ಕಿಲೋಮೀಟರ್, 21 ದಿನ ಪಾದಯಾತ್ರೆ ನಡೆಯುತ್ತದೆ ಎಂದು ಮಾಹಿತಿ ನೀಡಿದರು.
ಕೆಲವು ಕಡೆ ಅರಣ್ಯ ಪ್ರದೇಶ ಬರುವುದರಿಂದ ಅದಕ್ಕೆ ಬೇಕಾಗಿರುವ ಕ್ಲಿಯರೆನ್ಸ್ ತೆಗೆದುಕೊಳ್ಳಬೇಕು. ಎಂಟು ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಯಲಿದ್ದು, ಒಂದೊಂದು ದಿನ ಒಂದೊಂದು ಜಿಲ್ಲೆಯ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗುತ್ತಾರೆ. ಭಾರತದಲ್ಲಿ ಶಾಂತಿ, ಸೌಹಾರ್ದ ನೆಲೆಸಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದರು.
ಆ.26ರ ಮಡಿಕೇರಿ ಚಲೋ ಕುರಿತು ಮಾತನಾಡಿ, ಇದು ಸರ್ಕಾರದ ವಿರುದ್ಧ ಹೋರಾಟ. ಇವತ್ತು ಸಚಿವರು ಎಲ್ಲ ಕಡೆ ಕಾರ್ಯಕ್ರಮ ಮಾಡುತ್ತಾರೆ. ಅಲ್ಲಿ ನಮ್ಮ ಕಾರ್ಯಕರ್ತರನ್ನು ಕಳುಹಿಸಿದ್ರೆ ಏನಾಗುತ್ತೆ ಅಂತ ಒಮ್ಮೆ ಯೋಚನೆ ಮಾಡಿ ನೋಡಿ. ಕಲ್ಲು, ಮೊಟ್ಟೆ ಹೊಡೆದವನು ಹೀರೋ ಅಲ್ಲ. ಜನರು ಬದುಕು ಬಹಳ ಮುಖ್ಯ. ಶಾಂತಿಯಿಂದ ಜನರು ಬದುಕಬೇಕು. ಎಲ್ಲಿ ಬಿಜೆಪಿ ಪ್ರತಿಭಟನೆ ಮಾಡಿತ್ತೊ ಅಲ್ಲೆ ಖಂಡಿಸುತ್ತೇವೆ. ಕಾಂಗ್ರೆಸ್ನಿಂದ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ವಿಜಯಪುರ ಕಾಂಗ್ರೆಸ್ ಕಚೇರಿಯಲ್ಲಿ ಸಾವರ್ಕರ್ ಪೋಟೋ ಹಾಕಿದ ವಿಚಾರ ಕುರಿತು ಮಾತನಾಡಿ, ಇದಕ್ಕೆ ಬೊಮ್ಮಾಯಿ ಉತ್ತರ ಕೊಡಬೇಕು. ರಾಜ್ಯದಲ್ಲಿ ಶಾಂತಿ ಕಾಪಾಡಬೇಕು. ನಮ್ಮ ಕಾರ್ಯಕರ್ತರು ಮಲಗಿಲ್ಲ ಎಚ್ಚರ ಇದ್ದಾರೆ. ಇದಕ್ಕೆ ಉತ್ತರ ಕೊಡಲು ನಮಗೂ ಬರುತ್ತೆ. ಆದರೆ ಶಾಂತಿ ಕಾಪಾಡಬೇಕು ಎಂಬುದು ನಮ್ಮ ಉದ್ದೇಶ. ಸ್ವಾತಂತ್ರ್ಯ ದಿನ ನೆಹರು ಅವರ ಫೋಟೋವನ್ನು ಜಾಹಿರಾತಿನಲ್ಲಿ ಕೈಬಿಟ್ಟರು. ಆ ಮೂಲಕ ನೆಹರು ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಉತ್ತರಿಸಿದರು.
ಹಳ್ಳಿಗೆ ಹೋಗೋದು ಸಮಸ್ಯೆ ಕೇಳೋದು ಸಿದ್ದರಾಮಯ್ಯ ಅಂತ ಅಲ್ಲ, ಪ್ರತಿ ಪಕ್ಷದ ನಾಯಕನ ಸಂವಿಧಾನಿಕ ಜವಾಬ್ದಾರಿ. ಹೋದಾಗ ಕಲ್ಲು, ಮೊಟ್ಟೆ ಹೊಡೀತಾರೆ. ಕೊಡಗಿನಲ್ಲಿ ಯಾವುದೇ ಬಂಡವಾಳ ಹರಿದು ಹೋಗುತ್ತಿಲ್ಲ. ಕೇವಲ ಪ್ರವಾಸೋದ್ಯಮದಿಂದ ಜನರು ಬದುಕುತ್ತಿದ್ದಾರೆ. ಅವರ ಅನ್ನ ಕಿತ್ತುಕೊಳ್ಳಬೇಡಿ. ಇದೆ ರೀತಿಯಲ್ಲಿ ಅಶಾಂತಿ ಉಂಟಾದ್ರೆ ಜನರ ಬದಕು ಕಷ್ಟ ಆಗುತ್ತೆ.
ಹತ್ಯೆಯಾದಾಗ ಒಬ್ಬರ ಮನೆಗೆ ಮಾತ್ರ ಭೇಟಿ ನೀಡುತ್ತೀರಾ. ಎಲ್ಲರ ಮನೆಗೂ ಹೋಗಿ, ಎಲ್ಲರಿಗೂ ಪರಿಹಾರ ನೀಡಿ. ನಿಮಗೆ ಜವಾಬ್ದಾರಿ ಇದೆ ತಾನೆ. ಮೊಟ್ಟೆ ಬೇಕಿದ್ದರೆ ಇನ್ನೂ ನಾಲ್ಕು ಹೊಡೆಯಿರಿ. ಆದರೆ ಜನರನ್ನು ನೆಮ್ಮದಿಯಿಂದ ಬದುಕಲು ಬಿಡಬೇಕು. ರಾಜ್ಯದ ಗೌರವ ಮಣ್ಣುಪಾಲಾಗುತ್ತಿದೆ. ಶಿಕ್ಷಣ, ಪ್ರವಾಸಕ್ಕೆ ಹೊರಗಡೆಯಿಂದ ಜನರು ಬರ್ತಾರೆ. ಅದರಿಂದ ವ್ಯಾಪಾರ ನಡೀತಾ ಇದೆ. ಅದಕ್ಕೂ ಕಲ್ಲು ಹಾಕುವ ಕೆಲಸ ಮಾಡಬೇಡಿ ಎಂದು ಬಿಜೆಪಿ ಸರ್ಕಾರದ ವಿರುದ್ಧ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ವಿಜಯಪುರ ಕಾಂಗ್ರೆಸ್ ಕಚೇರಿಗೆ ವೀರ ಸಾವರ್ಕರ್ ಫೋಟೋ ಅಂಟಿಸಿ ಕಿಡಿಗೇಡಿಗಳು ಪರಾರಿ