ಬೆಂಗಳೂರು: ಬಿಜೆಪಿ ಆಕ್ರಮ ಎಸಗುವ ವಿಡಿಯೋ ನಮ್ಮ ಬಳಿ ಇದೆ. 5, 10 ಸಾವಿರ ರೂ. ಹಣ ಹಂಚಿಕೆಯಾಗುತ್ತಿದೆ. ಈ ರೀತಿ ಬಿಜೆಪಿ ಚುನಾವಣೆ ನಡೆಸುತ್ತಿದೆ. ಒಂದು ಮತಕ್ಕೆ 10 ಸಾವಿರ ರೂ. ಕೊಡ್ತಿದ್ದಾರೆ ಎಂದು ವಿಡಿಯೋ ತೋರಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಆಕ್ರಮ ಮಾಡ್ತಿದೆ ಅನ್ನೋ ವಿಡಿಯೋ ನಮ್ಮ ಬಳಿ ಇದೆ. ಒಂದು ಮತಕ್ಕೆ 10 ಸಾವಿರ ರೂ. ಕೊಡ್ತಿದ್ದಾರೆ. ಇಷ್ಟು ಭ್ರಷ್ಟ ಚುನಾವಣೆ, ಭ್ರಷ್ಟ ಪಕ್ಷವನ್ನು ನಾವು ನೋಡಿಲ್ಲ. ಅವರ ಪಾರ್ಟಿಯವರೇ ನಮಗೆ ಈ ವಿಡಿಯೋಗಳನ್ನ ಕಳುಹಿಸಿದ್ದಾರೆ. ದುಡ್ಡಿನ ಕವರ್, ಕಮಲದ ಫೋಟೋ ಇದೆ. ಸಿಎಂ ಪರ್ಮನೆಂಟ್ ಆಗಿ ಹುಬ್ಬಳ್ಳಿಯಲ್ಲೇ ಇರಲಿ. ಎಲ್ಲ ಮಂತ್ರಿಗಳೂ ಇದೇ ಕೆಲಸ ಮಾಡ್ತಿದ್ದಾರೆ ಎಂದು ದೂರಿದರು.
ಐಟಿ ದಾಳಿ: ನಮ್ಮ ಸ್ನೇಹಿತರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಎರಡು ಕಡೆ ಹೋಗಿದ್ರು. ನಮ್ಮ ಮನೆ ಮೇಲೆ ದಾಳಿ ನಡೆದಿಲ್ಲ. ನಾನು ಎಲ್ಲದಕ್ಕೂ ಸಿದ್ದನಿದ್ದೇನೆ. ನಮ್ಮ ಮನೆಗೆ ಯಾವ ಐಟಿ ಅಧಿಕಾರಿಗಳು ಬಂದಿಲ್ಲ. ನನ್ನ ಸ್ನೇಹಿತರ ಮನೆಗೆ ಹೋಗಿದ್ದಾರೆ ಅಷ್ಟೇ ಎಂದು ವಿವರಿಸಿದರು.
ಬಿಟ್ ಕಾಯಿನ್ ಪ್ರಕರಣ: ಬಿಟ್ ಕಾಯಿನ್ ಬಗ್ಗೆ ದೊಡ್ಡ ದೊಡ್ಡವರ ಹೆಸರುಗಳು ಕೇಳಿಬರ್ತಿದೆ. ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳ ಹೆಸರು ಕೇಳಿ ಬರ್ತಿದೆ. ಬಿಟ್ ಕಾಯಿನ್ ಪ್ರಕರಣ ಮುಚ್ಚಿ ಹಾಕುವ ಕೆಲಸ ಆಗ್ತಿದೆ. ಪ್ರಕರಣದಲ್ಲಿ ಯಾರ ಇದ್ದಾರೆ ಮಾಹಿತಿಯಿಲ್ಲ. ನಾನು ಬೇರೆಯವರ ರೀತಿ ಉಡಾಫೆ ಮಾತಾಡಲ್ಲ ಎಂದರು.