ಬೆಂಗಳೂರು : ಕಾವೇರಿ ಪಾದಯಾತ್ರೆ ಮಾಡಿದಾಗ ಪಾದಯಾತ್ರೆ ಬೆಂಬಲಿಸಲು ಹಲವು ಸ್ವಾಮೀಜಿಗಳು ಗಢ ಗಢ ಅಂತಾ ನಡುಗಿದರು. ಆದರೆ, ಮುರುಘಾ ಮಠದ ಶ್ರೀಗಳು ಹಲವು ಸ್ವಾಮೀಜಿಗಳ ಜತೆ ಬಂದು ಪಾದಯಾತ್ರೆಗೆ ಬೆಂಬಲ ಕೊಟ್ಟರು. ನನ್ನ ಬೆನ್ನು ತಟ್ಟಿ, ಹೋರಾಟಕ್ಕೆ ಆಶೀರ್ವಾದ ಮಾಡಿದರು. ನನ್ನ ಜೀವ ಇರುವವರೆಗೂ ಇದನ್ನು ಮರೆಯೋಕೆ ಸಾಧ್ಯ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಶರಣರ ಪಾದ ಸ್ಪರ್ಶ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ. ಕಾವೇರಿ ಮೇಕೆದಾಟು ಪಾದಯಾತ್ರೆ ಮಾಡುವಾಗ, ಎಷ್ಟೋ ಸ್ವಾಮೀಜಿಗಳು ಪಾದಯಾತ್ರೆಗೆ ಬರುವುದಕ್ಕೆ ಹೆದರಿದರು. ಸರ್ಕಾರಕ್ಕೆ ಗಢ ಗಢ ಎಂದು ನಡುಗಿಬಿಟ್ಟರು. ಆದರೆ, ಮುರುಘಾ ಮಠದ ಶ್ರೀಗಳು ಜೊತೆಗೆ ಹಲವು ಸ್ವಾಮೀಜಿಗಳನ್ನು ಕರೆದುಕೊಂಡು ಬಂದು, ನನ್ನ ಬೆನ್ನು ತಟ್ಟಿ, ಹೋರಾಟಕ್ಕೆ ಆಶೀರ್ವಾದ ಮಾಡಿದರು. ಇದನ್ನು ನನ್ನ ಜೀವನ ಇರೋವರೆಗೂ ಮರೆಯೋಕೆ ಸಾಧ್ಯ ಇಲ್ಲ. ಇದಕ್ಕಾಗಿ ನಾನು ಅವರಿಗೆ ಶರಣಾಗಿದ್ದೇನೆ ಎಂದು ಹೇಳಿದ್ದಾರೆ.
ಮುರುಘಾ ಮಠದ ಶ್ರೀಗಳ ಜನ್ಮದಿನಾಚರಣೆ ಮಾಡುತ್ತಿರುವುದು ನಮಗೆಲ್ಲಾ ಸೌಭಾಗ್ಯ. ನಾನು ಇಲ್ಲಿಗೆ ಬಂದಿರೋದು ಶ್ರೀಗಳ ಪಾದ ಸ್ಪರ್ಶ ಮಾಡಲು. ನಾವು ಹುಟ್ಟುವಾಗ ಯಾವುದೇ ಜಾತಿಗೆ ಅರ್ಜಿ ಹಾಕಿಲ್ಲ, ಸಾಯುವಾಗ ಮುಹೂರ್ತ ಕೂಡ ಯಾರು ನಿಗದಿ ಮಾಡಿಲ್ಲ, ಯಾವ ಧರ್ಮದಲ್ಲಿ ಹುಟ್ಟಿರುತ್ತೇವೋ ಆ ಧರ್ಮದ ಆಚರಣೆಯನ್ನು ಮಾಡುತ್ತೇವೆ.
ನಾವು ಧರ್ಮ ಬಿಟ್ಟರೂ ಸತ್ತಾಗ ನಮ್ಮನ್ನು ಹೂಳಬೇಕೋ, ಸುಡಬೇಕೋ ಅಂತಾ ನಮ್ಮ ಧರ್ಮವೇ ನಿರ್ಧರಿಸುತ್ತದೆ. ಹುಟ್ಟು ಸಾವಿನ ನಡುವೆ ನಾವೆಲ್ಲರೂ ಇದ್ದೇವೆ. ಸಮಾಜದ ಎಲ್ಲಾ ವರ್ಗಕ್ಕೆ ಶಕ್ತಿ ಕೊಟ್ಟವರು ಮುರುಘಾ ಮಠದ ಶ್ರೀಗಳು. ನಮ್ಮ ವಯಸ್ಸಿನಲ್ಲಿ ಒಂದೊಂದು ವರ್ಷ ಅವರಿಗೆ ಕೊಟ್ಟು, ಅವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಬೇಕು ಅಷ್ಟೇ ಎಂದರು.
ಸದ್ಯದ ಸ್ಥಿತಿಗೆ ಬೇಸರ ವ್ಯಕ್ತಪಡಿಸಿದ ಡಿಕೆಶಿ : ರಾಜ್ಯದ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿರುವುದಕ್ಕೆ ಡಿಕೆಶಿ ಬೇಸರ ವ್ಯಕ್ತಪಡಿಸಿದರು. ಇವತ್ತು ರಾಜ್ಯದಲ್ಲಿ ಅಶಾಂತಿ ಇದೆ, ಇದು ಒಳ್ಳೆಯದಲ್ಲ. ಸಮಾನತಾ ದಿನ ಅಂತೀರಿ, ಯಾರಿಗೆ ಸಮಾನತೆ ಇದೆ. ಯಾವುದೇ ಧರ್ಮೀಯರಿರಲಿ ಶಾಂತಿಯಿಂದ ಬದುಕುವ ವಾತಾವರಣದ ಬೇಕು. ಅಂತಹ ವಾತಾವರಣ ಸೃಷ್ಟಿಯಾಗಲು ಸ್ವಾಮೀಜಿಗಳು ಆಶೀರ್ವಾದ ಮಾಡಬೇಕು ಎಂದರು.
ಡಿಕೆಶಿ-ವಿಜಯೇಂದ್ರ ವೇದಿಕೆಯಲ್ಲಿ ಮಾತು : ಇನ್ನು ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಅಕ್ಕಪಕ್ಕ ಕುಳಿತಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತುಕತೆ ನಡೆಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಭಾಷಣದ ಮಧ್ಯೆ ಡಿಕೆಶಿ ಮತ್ತು ವಿಜಯೇಂದ್ರ ಕುಶಲೋಪರಿ ಮಾತನಾಡಿದ್ದಾರೆ.
ಡಿಕೆಶಿ ಹೊಗಳಿದ ಮುರುಘಾ ಶ್ರೀ : ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಮುರುಘಾ ಶ್ರೀಗಳು,ಡಿಕೆಶಿ ನಮ್ಮ ನಡುವಿನ ಆಶಾಕಿರಣ. ಈ ಕಾರ್ಯಕ್ರಮದಲ್ಲಿ ಅವರು ಸಿಂಹ ಗರ್ಜನೆ ಮಾಡಿದ್ದಾರೆ. ಡಿಕೆಶಿಯವರಿಗೆ ಉತ್ಸಾಹ ಇದೆ, ಸಾಧಿಸುವ ಜೀವನೋತ್ಸಾಹ ಇದೆ ಎನ್ನುತ್ತಾ ಡಿಕೆಶಿಯನ್ನು ಹೊಗಳಿದ್ದಾರೆ.
ನಂತರ ಮಾತು ಮುಂದುವರೆಸಿದ ಶ್ರೀಗಳು, ನಮ್ಮ ಮಠದಲ್ಲಿ ನಾವು ಬಂದ ಮೇಲೆ ಲಿಂಗ ತಾರತಮ್ಯ ನಿವಾರಣೆ ಮಾಡಿದ್ದೇವೆ, ಅಸ್ಪೃಶ್ಯತೆ ನಿವಾರಣೆ ಮಾಡಿದ್ದೇವೆ, ಮಠದಲ್ಲಿ ಸವರ್ಣೀಯ, ದಲಿತ ಎಂಬ ಬೇಧ-ಭಾವ ಇಲ್ಲ. ಸಹ ಪಂಕ್ತಿಭೋಜನ ನಮ್ಮ ಮಠದಲ್ಲಿದೆ. ಆದರೆ, ದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಇದೆ, ಇದನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ಅನಾಥ ಮಕ್ಳಳಿಗೆ ಅನಾಥಾಶ್ರಮ ತೆರೆದ ಕೀರ್ತಿ ಮುರುಘಾ ಮಠಕ್ಕೆ ಇದೆ. ಲಿಂಗಾಯತ ಮಠಗಳಲ್ಲಿ ಮುರುಘಾ ಮಠವೇ ಮೊದಲು ಅನಾಥಾಶ್ರಮ ತೆರೆದಿದ್ದು ಮುರುಘಾ ಶ್ರೀ ಹೇಳಿದ್ದಾರೆ.
ಓದಿ : ಮಲ್ಲಿಕಾರ್ಜುನ ಖರ್ಗೆಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ : ವಿಚಾರಣೆಗೆ ಹಾಜರ್