ಬೆಂಗಳೂರು: ಪ್ರಧಾನಮಂತ್ರಿಯವರ ಮಾತನ್ನು ನಾವು ಬೆಂಬಲಿಸುತ್ತೇವೆ. ಆದರೆ, ಅವರ ಭಾಷಣ ನಮಗೆ ನಿರಾಸೆ ತಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೇ 3ರವರೆಗೂ ಲಾಕ್‌ಡೌನ್ ವಿಸ್ತರಿಸಿದ್ದಾರೆ. ನಾವು ಸಂಪೂರ್ಣ ಸಹಕಾರ ಕೊಡ್ತೀವಿ. ಪ್ರಧಾನಿಯವರಿಂದ ಬಹಳ ನಿರೀಕ್ಷೆ ಇತ್ತು. ದೇಶದ ಹಿತಕ್ಕಾಗಿ ಅವರದ್ದೇ ಆದ ರೀತಿ ಸಂದೇಶ ನೀಡಿದ್ದಾರೆ. ಆದರೆ, ಕಾರ್ಮಿಕರು, ಉದ್ಯಮಿಗಳು ಹಾಗೂ ರೈತರಿಗೆ ವಿನಾಯಿತಿ ಕೊಡ್ತಾರೆ ಅಂದುಕೊಂಡಿದ್ದೆವು, ಇದರ ಬಗ್ಗೆ ಅವರು ಏನೂ ಹೇಳಿಲ್ಲ.
ಅಲ್ಲದೆ ವೈದ್ಯರಿಗೆ ಒಳ್ಳೆಯ ಕಿಟ್ ಕೊಡ್ತಿಲ್ಲ. ಬೇರೆ ಬೇರೆ ದೇಶಗಳಲ್ಲಿ ಉತ್ತಮ ಗುಣಮಟ್ಟದ ಕಿಟ್ ಕೊಟ್ಟಿದ್ದಾರೆ. ವೈದ್ಯರು, ಪೊಲೀಸರು, ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಕಿಟ್ ಕೊಡಲಿ. ನಮಗಂತೂ ಮೋದಿ ಭಾಷಣ ನಿರಾಸೆ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂವಿಧಾನ ಪೀಠಿಕೆ ಸಾಮೂಹಿಕ ವಾಚನ : ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜನ್ಮದಿನದ ಅಂಗವಾಗಿ ಸಂವಿಧಾನ ಪೀಠಿಕೆಯ ಸಾಮೂಹಿಕ ವಾಚನಕ್ಕೆ ಡಿ ಕೆ ಶಿವಕುಮಾರ್ ಕರೆ ಕೊಟ್ಟಿದ್ದರು. ಸಾಮೂಹಿಕ ವಾಚನ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ, ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ರಾಮಲಿಂಗಾರೆಡ್ಡಿ, ಅಲ್ಲಂ ವೀರಭದ್ರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತಿತರ ನಾಯಕರು ಭಾಗವಹಿಸಿದ್ದರು.