ಬೆಂಗಳೂರು: ನನ್ನ ಬಗ್ಗೆ ಯಾರು ಯಾವ ರೀತಿ ಮಾತನಾಡಬೇಕೋ ಹಾಗೆ ಮಾತನಾಡಿದ್ದಾರೆ. ಅದನ್ನು ಯಾರು ಯಾವ ರೀತಿ ಬಳಸಿಕೊಳ್ಳಬೇಕೋ, ಬಳಸಿಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಲೀಂ ಹಾಗೂ ವಿ.ಎಸ್ ಉಗ್ರಪ್ಪ ಅವರ ಸಂಭಾಷಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಇಂದು ಮತ್ತೊಮ್ಮೆ ಪ್ರತಿಕ್ರಿಯಿಸಿದ ಡಿಕೆಶಿ, ನಾನು ಬಿಜೆಪಿ ಅವರನ್ನಾಗಲಿ, ಮಾಧ್ಯಮಗಳನ್ನಾಗಲಿ ದೂಷಿಸುವುದಿಲ್ಲ. ನಾವು ಅವಕಾಶ ಕೊಟ್ಟಿದ್ದರಿಂದ ಬೇರೆಯವರು ಬಳಸಿಕೊಂಡಿದ್ದಾರೆ. ಇದು ನನ್ನ ವೈಯಕ್ತಿಕವಾದುದಲ್ಲ, ಪಕ್ಷದ ವಿಚಾರ. ಈ ಪಕ್ಷವನ್ನು ನಾನು ಮಾತ್ರ ಕಟ್ಟಿಲ್ಲ. ಹಳ್ಳಿಯ ಲಕ್ಷಾಂತರ ಜನ, ಕಾರ್ಯಕರ್ತರು ಈ ಪಕ್ಷ ಕಟ್ಟಿ ಬೆಳೆಸಿದ್ದಾರೆ ಎಂದರು.
ಬಿಜೆಪಿ ನಾಯಕರ ಧ್ವನಿ ಬಿದ್ದು ಹೋಗಿತ್ತಾ?
ಕಾಂಗ್ರೆಸ್ ವಿಚಾರವಾಗಿ ಬಿಜೆಪಿ ನಾಯಕರ ಹೇಳಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆಗಳಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, 'ಯಾರು ಏನು ಮಾತನಾಡುತ್ತಾರೋ ಮಾತನಾಡಲಿ. ಕಳೆದ ಎರಡು ವರ್ಷಗಳಿಂದ ಯಾರು ಏನೆಲ್ಲ ಮಾತನಾಡಿದ್ದಾರೆ ಅದನ್ನೂ ನೋಡಲಿ. ವಿಧಾನ ಪರಿಷತ್ ಸದಸ್ಯರಾದ ಹೆಚ್. ವಿಶ್ವನಾಥ್, ಸಿ ಪಿ ಯೋಗೀಶ್ವರ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮಾತನಾಡಿದರಲ್ಲ, ಅದಕ್ಕೆ ಉತ್ತರ ಯಾಕಿಲ್ಲ?. ಯತ್ನಾಳ್ ಅವರ ಹೇಳಿಕೆಗೆ ಸಿ.ಟಿ ರವಿ ಅವರಾಗಲಿ, ಈಗ ಮಾತನಾಡುತ್ತಿರುವವರಾಗಲಿ ಯಾಕೆ ಉತ್ತರ ನೀಡಲಿಲ್ಲ. ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಕಲೆಕ್ಷನ್, ಅವರ ಮೊಮ್ಮಗನ ಬಗ್ಗೆ ಮಾತನಾಡಿದಾಗ ಇವರ ಧ್ವನಿ ಏನು ಬಿದ್ದು ಹೋಗಿತ್ತಾ? ಆಗ್ಯಾಕೆ ಮಾತನಾಡಲಿಲ್ಲ? ಎಂದು ಪ್ರಶ್ನಿಸಿದರು.
ಪಕ್ಷ ಅಧಿಕಾರಕ್ಕೆ ತರುವುದಷ್ಟೇ ನನ್ನ ಕರ್ತವ್ಯ:
ಡಿ.ಕೆ ಶಿವಕುಮಾರ್, ಯಡಿಯೂರಪ್ಪ, ದೇವೇಗೌಡರನ್ನು ಒಂದೇ ವೇದಿಕೆ ಮೇಲೆ ಕರೆತರುವ ಪ್ರಯತ್ನ ಮಾಡುತ್ತೇವೆ ಎಂಬ ಸಿ.ಎಂ. ಇಬ್ರಾಹಿಂ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, 'ನಾನು ಪಕ್ಷದ ಅಧ್ಯಕ್ಷ, ಆ ಕೆಲಸ ಮಾಡುತ್ತಿದ್ದೇನೆ. ಅವರು ದೊಡ್ಡ ನಾಯಕರು. ಎಲ್ಲರ ಸಂಪರ್ಕ ಇಟ್ಟುಕೊಂಡಿರುವವರು. ಕಾರ್ಯಕರ್ತರ ಜೊತೆ ನಿಂತು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೇ ನನ್ನ ಕರ್ತವ್ಯ. ನಾನು ಆ ಬಗ್ಗೆ ಮಾತ್ರ ಯೋಚಿಸುತ್ತೇನೆ ಎಂದರು.

ಹಬ್ಬದ ಶುಭಾಶಯ:
ರಾಜ್ಯದ ಮಹಾ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳು. ಕಳೆದ ಎರಡು ವರ್ಷಗಳಿಂದ ಜನ ಸಂಕಷ್ಟ ಅನುಭವಿಸಿದ್ದು, ತಾಯಿ ಚಾಮುಂಡೇಶ್ವರಿ ಈ ಸಂಕಷ್ಟ ಬಗೆಹರಿಸಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ಆರ್ಥಿಕ ವ್ಯವಸ್ಥೆ ಉತ್ತಮವಾಗಲಿ. ಆರೋಗ್ಯ, ಸಾಮಾಜಿಕ, ಶೈಕ್ಷಣಿಕವಾಗಿ ಎಲ್ಲರಿಗೂ ಒಳ್ಳೆಯದಾಗಲಿ. ಮಕ್ಕಳ ಶಾಲೆ ಆರಂಭವಾಗಿದ್ದು, ಅವರು ಶಿಕ್ಷಣದ ಬಗ್ಗೆ ಗಮನಹರಿಸಬೇಕು ಎಂದು ಡಿಕೆಶಿ ಹೇಳಿದರು.
ಬಸವನಿಗೆ ನಮನ: ತಮ್ಮ ನಿವಾಸದ ಬಳಿ ಬಸವನಿಗೆ ನಮಿಸಿದರು..
ಇದನ್ನೂ ಓದಿ: ಯಾರನ್ನೋ ಬಲಿಪಶು ಮಾಡಲು ಕಾಂಗ್ರೆಸ್ನಲ್ಲಿ ಷಡ್ಯಂತ್ರ ನಡೆಯುತ್ತಿದೆ: ಎಸ್.ಟಿ. ಸೋಮಶೇಖರ್