ಬೆಂಗಳೂರು: ಕಂಪ್ಲಿ ಶಾಸಕ ಜೆ. ಎನ್. ಗಣೇಶ್ ಜೈಲಿನಲ್ಲೂ ಇಲ್ಲ ಹಾಗೂ ಜೈಲು ಆಸ್ಪತ್ರೆ ವಿಕ್ಟೋರಿಯಾದಲ್ಲೂ ಇಲ್ಲಎಂದು ದೂರಿ ಹೊಸಪೇಟೆಯ ವಿಜಯನಗರ ಕ್ಷೇತ್ರದ ಶಾಸಕ ಆನಂದ ಸಿಂಗ್ ಜನಪ್ರತಿನಿಧಿಗಳ ಕೋರ್ಟ್‌ಗೆ ಹೆಚ್ಚುವರಿ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಈ ಕುರಿತಂತೆ ಆನಂದ್ ಸಿಂಗ್ ಪರಪ್ರಾಸಿಕ್ಯೂಟರ್ ಬಿ.ರಾಜೇಶ್ವರಿ ಅವರು ಶನಿವಾರ, ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯಕ್ಕೆ ಈ ಅರ್ಜಿ ಸಲ್ಲಿಸಿದರು. ಆರೋಪಿಗಳ ಪರ ವಕೀಲರಿಗೆ ಹೆಚ್ಚುವರಿ ತಕರಾರು ಅರ್ಜಿಯ ನಕಲನ್ನು ನೀಡದೆ, ನೇರವಾಗಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ ಎಂಬ ಕಾರಣಕ್ಕೆ ವಿಚಾರಣೆಯ ಮುಂದಿನ ಪ್ರಕ್ರಿಯೆಯನ್ನು ಇದೇ ಮಾರ್ಚ್ 25ಕ್ಕೆ ಮುಂದೂಡಲಾಗಿದೆ.
ನ್ಯಾಯಾಂಗ ಬಂಧನದಲ್ಲಿದ್ದ ಗಣೇಶ್, ಹರ್ನಿಯಾ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಸ್ಪತ್ರೆಯಲ್ಲಿ ಅವರು ಇಲ್ಲ ಎಂಬ ಮಾಧ್ಯಮಗಳಲ್ಲಿನ ವರದಿ ಗಮನಿಸಿ ನನಗೆ ಆಘಾತವಾಗಿದೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಶಾಸಕರುಗಳಾದ ಗಣೇಶ್ ಮತ್ತು ಆನಂದ್ ಸಿಂಗ್ ಇತ್ತೀಚೆಗೆ ಈಗಲ್‌ಟನ್ ರೆಸಾರ್ಟ್‌ನಲ್ಲಿ ಪರಸ್ಪರ ಕಾದಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಗಣೇಶ್ ಅವರು, ಆನಂದ್ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.