ಬೆಂಗಳೂರು : ಕೋವಿಡ್ ಮೂರನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಪ್ರಮಾಣ ಮುಂದುವರೆದಿದೆ. ಸೋಂಕು ಹೆಚ್ಚಳವಾಗ್ತಿರುವ ಹಿನ್ನೆಲೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ತಜ್ಞರ ಸಮಿತಿ ಸಭೆ ನಡೆಯಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಡಾ. ಸುಧಾಕರ್, ಇಂದು ಸಿಎಂ ಸಭೆ ಕರೆದಿದ್ದಾರೆ. ಪಾಸಿಟಿವ್ ಕೇಸ್, ಆಸ್ಪತ್ರೆಗೆ ಸೇರುವವರು, ಮಕ್ಕಳ ಬಗ್ಗೆ ಹಾಗೂ ವೀಕೆಂಡ್ ಕರ್ಫ್ಯೂ ಬಗ್ಗೆಯೂ ಇವತ್ತಿನ ಸಭೆಯಲ್ಲಿ ಚರ್ಚೆ ಮಾಡ್ತೀವಿ.
ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವುದು ನಮ್ಮ ಕೆಲಸ. ಹೆಚ್ಚು ಸಾವು-ನೋವು ಆಗಬಾರದು ಅನ್ನೋದು ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಇಂದು ಸಭೆ ನಡೆಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಬೆಳಗಾವಿ ಮಕ್ಕಳ ಸಾವಿನ ಪ್ರಕರಣದ ಬಗ್ಗೆ 2 ದಿನದಲ್ಲಿ ವರದಿ : ಬೆಳಗಾವಿಯಲ್ಲಿ ಮೂವರು ಮಕ್ಕಳು ರುಬೆಲ್ಲಾ ಚುಚ್ಚುಮದ್ದಿನಿಂದ ಸಾವನ್ನಪ್ಪಿರುವ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸೆಪ್ಟಿಕ್ ಶಾರ್ಟ್ ಸಿಂಡ್ರೋಮ್ನಿಂದ ಸತ್ತಿರೋ ಬಗ್ಗೆ ವರದಿ ಆಗಿದೆ. ಆದರೂ ಮತ್ತೊಂದು ತನಿಖೆಗೆ ಸೂಚನೆ ನೀಡಿದ್ದೇನೆ. ಎರಡು ದಿನಗಳಲ್ಲಿ ವರದಿ ಕೊಡಲು ಸೂಚನೆ ನೀಡಲಾಗಿದೆ.
ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲು ಸೂಚಿಸಿದ್ದು, ಅಲ್ಲಿನ ANM ಮತ್ತು ಫಾರ್ಮಸಿಸ್ಟ್ರನ್ನ ತಕ್ಷಣ ಅಮಾನತು ಮಾಡಲು ಸೂಚನೆ ನೀಡಿದ್ದೇನೆ. ನೋಡಲ್ ಅಧಿಕಾರಿಗಳನ್ನ ತನಿಖೆಗೆ ಕಳುಹಿಸುತ್ತಿದ್ದೇನೆ. ಎರಡು ದಿನಗಳಲ್ಲಿ ವರದಿ ಕೈಸೇರಲಿದೆ ಎಂದರು.
ರಾಜ್ಯದಲ್ಲಿ ನೆಗಡಿ - ಇದು ಸೀಸನಲ್ ಫ್ಲೋ : ಡಿಸೆಂಬರ್ನಿಂದ ಶುರುವಾಗಿ ಫೆಬ್ರವರಿವರೆಗೂ ಪ್ರತಿ ವರ್ಷ ನೆಗಡಿ ಇರುತ್ತೆ. ಇದು ಸೀಸನಲ್ ಫ್ಲೋ ಆಗಿದ್ದು, ಸಾರಿ ಮತ್ತು ILI ಕೇಸ್ ಅವು. ಯಾರಿಗೆಲ್ಲ ಈ ಲಕ್ಷಣ ಇದೆಯೋ ಅವರಿಗೆ ಆದ್ಯತೆ ಮೇಲೆ ಟೆಸ್ಟ್ ಮಾಡ್ತಿದ್ದೇವೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ನಾವು ಹೆಚ್ಚು ಟೆಸ್ಟ್ ಮಾಡ್ತಿದ್ದೇವೆ.
ನಮ್ಮಲ್ಲಿ ಸಾವಿನ ಪ್ರಮಾಣ ಕಡಿಮೆ ಇದ್ದು, ಆಸ್ಪತ್ರೆಗೆ ಸೇರುವವರ ಪ್ರಮಾಣವೂ ಕಡಿಮೆ ಇದೆ. ನಾವು ಮುಂಚಿತವಾಗಿ ಎಲ್ಲ ಕ್ರಮಗಳನ್ನ ತೆಗೆದುಕೊಳ್ತಿರೋದರಿಂದ ನಮ್ಮಲ್ಲಿ ವೈರಸ್ ನಿಯಂತ್ರಣದಲ್ಲಿದೆ ಎಂದು ಮಾಹಿತಿ ನೀಡಿದರು.
(ಇದನ್ನೂ ಓದಿ: ಪಂಚ ರಾಜ್ಯಗಳ ಚುನಾವಣೆ ಭರಾಟೆ ನಡುವೆ ಕೋವಿಡ್ ಕಂಟ್ರೋಲ್ ಮಾಡಿದ ಭಾರತ.. ಇಂದಿನ ಪ್ರಕರಣಗಳ ಸಂಖ್ಯೆ ಎಷ್ಟು ಗೊತ್ತೇ?)