ಬೆಂಗಳೂರು: ನಾವು ಸರಿ, ಅವರದ್ದು ತಪ್ಪು ಎನ್ನುವುದು ಏಕೆ? ನಾವು ಕೂಡ ನೋವು ನುಂಗಿಕೊಂಡೇ ಎಲ್ಲವನ್ನೂ ಸಹಿಸಿಕೊಂಡಿದ್ದೆವು. ಆದರೆ, ದೇವೇಗೌಡರು ಈ ರೀತಿ ಹೇಳಿಕೆ ನೀಡಬಾರದಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬೀಳುವುದಕ್ಕೆ ಸಿದ್ದರಾಮಯ್ಯ ಕಾರಣ ಎಂದು ದೇವೇಗೌಡರು ನೀಡಿರುವ ಹೇಳಿಕೆ ಬೇಸರ ತರಿಸಿದೆ. ಸರ್ಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಸರ್ವ ಪ್ರಯತ್ನ ಮಾಡಿದ್ದರು. ಈಗಿದು ಬೇಡವಾದ ಮಾತು. ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿಯೇ ಪ್ರಚಾರ ಮಾಡಿದ್ದೇವೆ. ದೇವೇಗೌಡರು ಏಕೆ ಈ ಮಾತು ಹೇಳಿದ್ದಾರೋ ಗೊತ್ತಿಲ್ಲ ಎಂದರು.
ದೇವೇಗೌಡರು ಕಣ್ಣೀರು ಹಾಕುವ ಸಮಸ್ಯೆ ಎಲ್ಲೂ ಕಂಡಿಲ್ಲ. ಕುಮಾರಸ್ವಾಮಿ ಅವರಿಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದೆವು. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿಗೆ ಕಣ್ಣೀರು ತರಿಸುವಂಥ ಪರಿಸ್ಥಿತಿ ಎಂದೂ ಉದ್ಭವವಾಗಿರಲಿಲ್ಲ. ಪದೇಪದೆ ಅವರು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಎಚ್ಚರಿಸಿದರು.
ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ಆರೋಪಿಸಿದ್ದರ ಪರಿಣಾಮ ಸಿದ್ದರಾಮಯ್ಯ ಇಂದು ಪ್ರತಿಕ್ರಿಯಿಸಿದ್ದಾರೆ. ಅವರು ಸುಮ್ಮನಿದ್ದಿದ್ದರೆ, ಸಿದ್ದರಾಮಯ್ಯ ಕೂಡ ಹಾಗೆ ಇರುತ್ತಿದ್ದರು. ದೇವೇಗೌಡರು ಕೆಣಕಿದಕ್ಕಾಗಿ ಸಿದ್ದರಾಮಯ್ಯ ಮಾತನಾಡುವ ಪರಿಸ್ಥಿತಿ ಅನಿವಾರ್ಯವಾಯ್ತು ಎಂದು ತಿಳಿಸಿದರು.
ಕಾಂಗ್ರೆಸ್ನಲ್ಲಿ 80 ಶಾಸಕರಿದ್ದರೂ ಅವರೇ ಅಧಿಕಾರದಲ್ಲಿದ್ದರು. ದೇವೇಗೌಡರ ಹೇಳಿಕೆ ನಾಟಕೀಯವಾದುದು. ಸಿದ್ದರಾಮಯ್ಯ ಎಲ್ಲಿಯೂ ಹಿಂದೆ ಮುಂದೆ ಸರ್ಕಾರದ ಬಗ್ಗೆ ಮಾತನಾಡಿರಲಿಲ್ಲ. ಜೆಡಿಎಸ್ಗೆ ಕಾಂಗ್ರೆಸ್ ಮುಕ್ತವಾದ ಸಹಕಾರ ಕೊಟ್ಟಿತ್ತು. ಅಧಿಕಾರ ಕಳೆದುಕೊಂಡ ಬಳಿಕ ಅವರು ಸರಿಯಿಲ್ಲ, ಇವರು ಸರಿಯಿಲ್ಲ ಅಂದ್ರೆ ಏನರ್ಥ. ಅಧಿಕಾರಿದಲ್ಲಿದ್ದಾಗ ಮಾತನಾಡದೆ ಈಗ ಆರೋಪಿಸಿದರೆ ಏನು ಪ್ರಯೋಜನ. ಹಾಗಿದ್ದಾಗ ದೇವೇಗೌಡರು ಏಕೆ ಆರೋಪ ಮಾಡಬೇಕಿತ್ತು ಎಂದು ಕುಮಾರಸ್ವಾಮಿ ಟ್ವೀಟ್ಗೆ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದರು.
ಮೈತ್ರಿ ಮುರಿದುಕೊಳ್ಳುವ ಸೂಚನೆ: ಜೆಡಿಎಸ್ ಜೊತೆ ಮೈತ್ರಿ ಮುರಿದುಕೊಳ್ಳುವ ಬಗ್ಗೆ ಸಂದರ್ಭ ಬಂದಾಗ ಸ್ಪಷ್ಟ ನಿರ್ಧಾರ ತೆಗೆದುಕೊಳ್ತೇವೆ. ಮೈತ್ರಿಯ ಮುಂದುವರಿಕೆ ಬಗ್ಗೆ ಈಗ ಮಾತನಾಡುವುದಿಲ್ಲ ಎಂದರು.