ಬೆಂಗಳೂರು: ಹಿರಿಯ ರಾಜಕೀಯ ಮುತ್ಸದ್ದಿ ಮಾಜಿ ಪ್ರಧಾನಿ ದೇವೆಗೌಡರು ಗೋಹತ್ಯೆ ನಿಷೇಧ ವಿರೋಧಿಸುವುದಾಗಿ ಹಾಗೂ ಈ ಮಸೂದೆಯಿಂದ ಸಮಾಜದಲ್ಲಿ ಅಶಾಂತಿ ಮತ್ತು ಜನರ ಬಾಳಲ್ಲಿ ಅಲ್ಲೋಲ ಕಲ್ಲೋಲ ಆಗುತ್ತದೆ ಎಂದು ಪತ್ರಿಕಾ ಹೇಳಿಕೆ ನೀಡಿರುವುದು ವಿಷಾದನೀಯ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ಗೋವು ರೈತನೊಂದಿಗೆ ಇದ್ದಷ್ಟು ಅವಧಿ ಅವನ ಆದಾಯದಲ್ಲಿ ವೃದ್ಧಿ ಆಗುತ್ತದೆಯೇ ವಿನಃ ನಷ್ಟ ಆಗುವುದಿಲ್ಲ. ಈ ಮಸೂದೆಯಿಂದ ರೈತರ ಗೋವುಗಳ ಕಳ್ಳ ಸಾಗಣೆಗೆ ಕಡಿವಾಣ ಬೀಳುವುದರಿಂದ ರೈತ ನಿಶ್ಚಿಂತೆಯಿಂದ ಪಶುಸಂಗೋಪನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಮುಂಬರುವ ದಿನಗಳಲ್ಲಿ ಉತ್ತರಪ್ರದೇಶ ಮಾದರಿಯಲ್ಲಿ ಗೋವುಗಳ ನಿರ್ವಹಣೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಗೋವು ಕೇವಲ ನಮ್ಮ ಸಂಸ್ಕೃತಿಯ ಒಂದು ಭಾಗವಲ್ಲ ರೈತನ ಜೀವನಾಧಾರ ಹೀಗಾಗಿ ಈ ಮಸೂದೆಯಿಂದ ರೈತರಿಗೆ ಅನುಕೂಲ ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ನಾವು ಬಿಜೆಪಿಯವರು ಸಭ್ಯಸ್ಥರು, ಕಾಂಗ್ರೆಸ್‌ನವರೇ ಗಲಾಟೆ ಮಾಡಿದ್ದು: ರೇಣುಕಾಚಾರ್ಯ
ಮಹಾತ್ಮಾ ಗಾಂಧಿ ಅವರು ಸಹ ಗೋವುಗಳ ಸಂರಕ್ಷಣೆ ಬಗ್ಗೆ ಹೇಳಿದ್ದರು. ''ಗೋ ವಧೆ ಬರೀ ಕಾನೂನಿನ ಮೂಲಕ ತಡೆಯಲು ಸಾಧ್ಯವಿಲ್ಲ. ಇದಕ್ಕೆ ತಿಳಿವಳಿಕೆ, ಶಿಕ್ಷಣ, ಕರುಣೆ, ಸಹಾನುಭೂತಿಯೂ ಅಗತ್ಯ,'' ಎಂದು ಹೇಳಿದ್ದರು. ಭಾರತೀಯ ಸಂವಿಧಾನದಲ್ಲೂ ರಾಜ್ಯ ಸರಕಾರಗಳನ್ನು, ಗೋವು ಹಾಗೂ ಗೋವುಗಳ ನಾನಾ ತಳಿಗಳನ್ನು ಸಂರಕ್ಷಿಸಲು ಹಾಗೂ ವರ್ಧಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ತಿಳಿಸಲಾಗಿದೆ. ಹೀಗಿದ್ದಾಗ ಗೋವುಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಆಗಬೇಕು ಎಂದು ಸಚಿವ ಪ್ರಭು ಚವ್ಹಾಣ್ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ 2010 ರಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆ ಮಾಡಿದಾಗ ಕೇಂದ್ರ ಸರ್ಕಾರಕ್ಕೆ ಇದ್ದ ಆಕ್ಷೇಪಣೆಗಳನ್ನು ಈಗಿನ ಮಸೂದೆಯಲ್ಲಿ ಸರಿಪಡಿಸಲಾಗಿದೆ. ಹಳೆಯ ಮಸೂದೆಯಲ್ಲಿ ಎಮ್ಮೆ /ಕೋಣಗಳ ಹತ್ಯೆಗೂ ನಿಷೇಧವಿತ್ತು. ಆದರೆ, 2020 ರ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕದಲ್ಲಿ 13 ವರ್ಷಕ್ಕಿಂತ ಮೀರಿದ ಎಮ್ಮೆ/ಕೋಣಗಳನ್ನು ಕೈ ಬಿಡಲಾಗಿದೆ. ವರ್ಷದಿಂದ ವರ್ಷಕ್ಕೆ ಗೋವುಗಳ ಸಂತತಿ ಕಡಿಮೆ ಆಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ ಆಗಿದ್ದು, ಈ ಮಸೂದೆ ಅವುಗಳ ಸಂತತಿ ವೃದ್ಧಿಗೂ ಅವಕಾಶ ಕಲ್ಪಿಸಿಕೊಡಲಿದೆ.
ಇದನ್ನೂ ಓದಿ: ಕಾಲೇಜು ಶುಲ್ಕ ಕಟ್ಟಲು ಬಂದ ಯುವತಿ ಮೇಲೆ ಅತ್ಯಾಚಾರ: ಕೊಲೆ
19 ನೇ ಜಾನುವಾರು ಗಣತಿ ಪ್ರಕಾರ ರಾಜ್ಯದಲ್ಲಿ ಒಟ್ಟು ಗೋವು ಮತ್ತು ಎಮ್ಮೆಗಳ ಸಂಖ್ಯೆ 1,29 ಕೋಟಿ ಇತ್ತು ಆದರೆ 20ನೇ ಜಾನುವಾರುಗಳ ಗಣತಿ ಪ್ರಕಾರ 1.14 ಕೋಟಿಗೆ ಇಳಿಕೆ ಆಗಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿದಾಗ ಮಸೂದೆ ಗೋವುಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ಅನುಕೂಲ ಆಗಲಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಗೋಹತ್ಯೆ ನಿಷೇಧ ಮಸೂದೆ ಯಾವುದೇ ಒಂದು ಸಮುದಾಯವನ್ನು ಇಟ್ಟುಕೊಂಡು ರೂಪಿಸಿದ್ದಲ್ಲ, ಈ ಮಸೂದೆಯಿಂದ ದೇಶಿ ಗೋವು ತಳಿಗಳ ವೃದ್ಧಿ ಮತ್ತು ಸಂವರ್ಧನೆಗೆ ಹೆಚ್ಚು ಅವಕಾಶ ಕಲ್ಪಿಸಲಿದೆ ಎಂದು ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದಾರೆ.