ಬೆಂಗಳೂರು: ಮನೆಯಲ್ಲಿ ಸಜೀವ ಮದ್ದು ಗುಂಡುಗಳು ಇರುವುದರಿಂದ ಮಗನ ಜೀವನದಲ್ಲಿ ಕೌಟುಂಬಿಕ ಕಲಹ ಉಂಟಾಗಿದೆ ಎಂದು ಭಾವಿಸಿ ಗುಂಡುಗಳನ್ನು ಯಲಹಂಕ ಠಾಣಾ ವ್ಯಾಪ್ತಿಯ ಖಾಸಗಿ ಹೋಟೆಲ್ನ ಕಾರ್ ಪಾರ್ಕಿಂಗ್ನಲ್ಲಿ ಏರ್ ಫೋರ್ಸ್ ನಿವೃತ್ತ ಗ್ರೂಪ್ ಕ್ಯಾಪ್ಟನ್ ಪತ್ನಿ ಹೂತಿಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೌಸ್ ಕೀಪಿಂಗ್ ಕೆಲಸ ಮಾಡುವ ಫಯಾಜ್ ಅಹಮದ್ ಎಂಬುವರು ಡಿಸೆಂಬರ್ 17 ರಂದು ಮಧ್ಯಾಹ್ನ ಜಕ್ಕೂರು ವಾಯುನೆಲೆ ಬಳಿಯಿರುವ ಹೋಟೆಲ್ ಸ್ವಚ್ಛಗೊಳಿಸಬೇಕಾದ್ರೆ ರೈಫಲ್ಗೆ ಬಳಸುವ ಮದ್ದುಗುಂಡು ಸಿಕ್ಕಿದ್ದು, ಇದನ್ನು ಮಾಲೀಕರಿಗೆ ತಿಳಿಸಿದ್ದರು. ನಂತರ ಮಾಲೀಕ ಶ್ರೀನಿವಾಸ್ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತಪಾಸಣೆ ನಡೆಸಿ ಪರಿಶೀಲಿಸಿದಾಗ ಸಿಂಗಲ್ ಬ್ಯಾರಲ್ ಗನ್ಗೆ ಬಳಸುವ ಮದ್ದುಗುಂಡು ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಅನುಮಾನಾಸ್ಪದವಾಗಿ ಗುಂಡು ದೊರೆತಿರುವ ಬಗ್ಗೆ ಬಾಂಬ್ ನಿಷ್ಕ್ರಿಯ ತಂಡ ಹಾಗೂ ಶ್ವಾನದಳ ಬಂದು ತಪಾಸಣೆ ನಡೆಸಿದಾಗ ಮತ್ತೊಂದು ಗುಂಡು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡುಗಳನ್ನು ಹೂತಿಟ್ಟಿರುವ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಹೋಟೆಲ್ ಬಳಿ ಮಹಿಳೆ ಕಾರಿನಲ್ಲಿ ಬಂದಿರುವ ಬಗ್ಗೆ ಮಾಹಿತಿ ಪಡೆದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಕಾರಿನ ನೋಂದಣಿ ಸಂಖ್ಯೆ ಮೂಲಕ ಜಾಡು ಹಿಡಿದು ಹೊರಟ ಪೊಲೀಸರಿಗೆ ಮಹಿಳೆಯ ಮನೆ ಯಲಹಂಕದಲ್ಲಿರುವುದು ಗೊತ್ತಾಗಿದೆ. ಅಲ್ಲಿಗೆ ಹೋದಾಗ ಮನೆ ಖಾಲಿ ಮಾಡಿರುವುದನ್ನ ಖಚಿತಪಡಿಸಿಕೊಂಡಿದ್ದಾರೆ. ಸಿಡಿಆರ್ ಹಾಗೂ ಮೊಬೈಲ್ ನೆಟ್ ವರ್ಕ್ ಮೂಲಕ ಶೋಧಿಸಿದಾಗ ಆಕೆ ಕೊಡಿಗೆಹಳ್ಳಿಯಲ್ಲಿ ವಾಸ್ತವ್ಯ ಹೂಡಿರುವುದು ತಿಳಿದುಬಂದಿದೆ. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯನ್ನು ವಿಚಾರಿಸಿದಾಗ ಮತ್ತೊಂದು ಸತ್ಯ ಅನಾವರಣಗೊಂಡಿದೆ.
ಏರ್ ಫೋರ್ಸ್ ನಿವೃತ್ತ ಗ್ರೂಪ್ ಕ್ಯಾಪ್ಟನ್ ಪತ್ನಿಯ ಕೈಚಳಕ:
ಭಾರತೀಯ ವಾಯುನೆಲೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿರುವ ಗ್ರೂಪ್ ಕ್ಯಾಪ್ಟನ್ವೊಬ್ಬರು ಕೆಲ ವರ್ಷಗಳ ಹಿಂದೆ ಮದ್ದು ಗುಂಡು ಸಮೇತ ರೈಫಲ್ ಖರೀದಿಸಿದ್ದರು. ಕಳೆದ ವರ್ಷ ಕಾನೂನು ಪ್ರಕಾರವಾಗಿ ಅನ್ಯ ವ್ಯಕ್ತಿಯೊಬ್ಬರಿಗೆ ಗನ್ ಮಾರಾಟ ಮಾಡಿದ್ದರು. 15 ಗುಂಡುಗಳನ್ನು ಮಾತ್ರ ಮಾರಾಟ ಮಾಡದೆ ಮನೆಯಲ್ಲಿ ಉಳಿಸಿಕೊಂಡಿದ್ದರು. ಮತ್ತೊಂದೆಡೆ, ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಗ, ಸಾಂಸಾರಿಕ ಕಲಹದಿಂದ ಬೇಸತ್ತಿದ್ದ. ಅಂದುಕೊಂಡ ಕೆಲಸಗಳು ಆಗುತ್ತಿಲ್ಲ ಎಂದು ನೊಂದಿರುವುದನ್ನು ಕಂಡು ತಾಯಿ ದುಃಖಿತರಾಗಿದ್ದಳು. ಮನೆಯಲ್ಲಿ ಮದ್ದುಗುಂಡುಗಳು ಇರುವುದರಿಂದಲೇ ಮಗನ ಜೀವನ ಹೀಗಾಗಿದೆ. ಜೀವಂತ ಗುಂಡುಗಳನ್ನು ಮನೆಯಿಂದ ಹೊರ ಸಾಗಿಸಿದರೆ ಮಗನಿಗೆ ಒಳ್ಳೆಯದಾಗಲಿದೆ ಎಂದು ಭಾವಿಸಿ ಮನೆಯಲ್ಲಿದ್ದ 15 ಗುಂಡುಗಳ ಪೈಕಿ ಎರಡು ಗುಂಡುಗಳನ್ನು ಖಾಸಗಿ ಹೋಟೆಲ್ ಕಾರ್ ಪಾರ್ಕಿಂಗ್ ಲಾಟ್ನಲ್ಲಿ ಹೂತಿಟ್ಟಿರುವುದಾಗಿ ಪೊಲೀಸರ ಮುಂದೆ ಮಹಿಳೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.