ಬೆಂಗಳೂರು: ರಾಜ್ಯದ ಪಠ್ಯಕ್ರಮ ಹೊಂದಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನಿತ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಕುರಿತು ಸುತ್ತೋಲೆ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾ ಯೋಜನೆ ಅನುಷ್ಠಾನಗೊಳಿಸುವಂತೆ ಸೂಚಿಸಿದೆ. ಮೇ 16 ರಿಂದ ಶೈಕ್ಷಣಿಕ ಚಟುವಟಿಕೆ ಶುರುವಾಗಲಿದೆ.
ಅಂದಹಾಗೇ, ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಶೈಕ್ಷಣಿಕ ಚಟುವಟಿಕೆಗಳನ್ನು ಅವಲೋಕಿಸಿದಂತೆ, ಈ ಹಿಂದೆ ಸಾಂಕ್ರಮಿಕ ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳಿಗೆ ಅನಿವಾರ್ಯವಾಗಿ ಫೆಬ್ರವರಿ 2020-21 ರಿಂದ ರಜೆ ನೀಡುವ ಸಂದರ್ಭ ಒದಗಿ ಬಂದಿತ್ತು. ಮಕ್ಕಳ ನಿರಂತರ ಕಲಿಕಾಗೆ 2019-20, 2020-21, ಮತ್ತು 2021-22 ಈ ಮೂರು ಶೈಕ್ಷಣಿಕ ಸಾಲುಗಳಲ್ಲಿ ಆಗಿಂದಾಗ್ಗೆ ರಾಜ್ಯದ ಶಾಲೆಗಳನ್ನು ಸ್ಥಗಿತಗೊಳಿಸಿರುವುದರಿಂದಾಗಿ ಶೇಕಡಾ 50 ರಿಂದ 60 ರಷ್ಟು ದಿನಗಳಲ್ಲಿ ಮಾತ್ರ ಭೌತಿಕವಾಗಿ ಶಾಲೆಗಳನ್ನು ನಡೆಸಲಾಗಿತ್ತು.
ಇದರಿಂದಾಗಿ ರಾಜ್ಯದ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆ ಉಂಟಾಗಿತ್ತು. ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ನಡೆಸಲು ಸಾಧ್ಯವಾಗದೇ ಪರ್ಯಾಯ ಮಾರ್ಗಗಳ ಮುಖಾಂತರ ಆನ್‌ಲೈನ್ ಮೂಲಕ ಶಿಕ್ಷಣವನ್ನು ನೀಡಬೇಕಾಯ್ತು. ಆದರೆ ಈ ಪರ್ಯಾಯ ವಿಧಾನದಿಂದ ನಿರೀಕ್ಷಿತ ಮಟ್ಟದ ಕಲಿಕಾ ಪ್ರಗತಿ ಸಾಧಿಸಲು ಆಗಿಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಕಲಿಕಾ ಚೇತರಿಕೆ ಕಾರ್ಯಕ್ರಮ: ಈ ಕಲಿಕಾ ಹಿನ್ನಡೆಯನ್ನು / ಕಲಿಕಾ ಕೊರತೆಯನ್ನು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಶೈಕ್ಷಣಿಕ ವರ್ಷದ ಪೂರ್ಣಾವಧಿಯಲ್ಲಿ ಪ್ರಸ್ತುತ ಸಾಲಿನ ಪಠ್ಯ ವಸ್ತುವಿನ ಬೋಧನೆಗೆ ಹಿನ್ನಡೆಯಾಗದಂತೆ ಸಹಕಾರಿಯಾಗುವಂತೆ ಆಯೋಜಿಸಲಾಗಿದೆ. ಈ ಸಂಬಂಧ ಶೈಕ್ಷಣಿಕ ವರ್ಷವನ್ನು ಮೇ 16 ರಿಂದಲೇ ಪ್ರಾರಂಭಿಸಿ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವುದರ ಮೂಲಕ ಕಲಿಕಾ ಚೇತರಿಕೆ ವರ್ಷವೆಂದು ಕಾರ್ಯಸೂಚಿಯನ್ನು ರೂಪಿಸಲಾಗಿದೆ.
ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2022-23 ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೊಳಿಸಲು ಸೂಚಿಸಲಾಗಿದೆ. ಈಗಾಗಲೇ ಶೈಕ್ಷಣಿಕ ವರ್ಷದ ಪ್ರಾರಂಭ ಮತ್ತು ಕಲಿಕಾ ಪೂರಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸೂಚಿಸಿದೆ. ಮುಂದುವರೆದು ಶೈಕ್ಷಣಿಕ ಸಾಲಿನ ಚಟುವಟಿಕೆಗಳನ್ನು ಸಮಗ್ರ ನಿರ್ವಹಣೆಗೆ ಸಹಕಾರಿಯಾಗುವಂತೆ ಕಾರ್ಯಸೂಚಿಯನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಲು ಸೂಚಿಸಿದೆ.
ಶಾಲಾ ಕರ್ತವ್ಯದ ದಿನಗಳು ಹೀಗಿವೆ: ಮೊದಲ ಅವಧಿ- ಮೇ 16 ರಿಂದ ಅಕ್ಟೋಬರ್ 16 ತನಕ, ಎರಡನೇ ಅವಧಿ- ಅಕ್ಟೋಬರ್ 17 ರಿಂದ ಏಪ್ರಿಲ್ 10ರ ತನಕ, ದಸರಾ ರಜೆ- ಅಕ್ಟೋಬರ್ 3 ರಿಂದ 16ರ ತನಕ, ಬೇಸಿಗೆ ರಜೆ - 2023ರ ಏಪ್ರಿಲ್ 11 ರಿಂದ ಮೇ 28 ತನಕ.
ಶೈಕ್ಷಣಿಕ ಸಾಲಿನಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ 256 ಕರ್ತವ್ಯ ದಿನಗಳು ಲಭ್ಯವಾಗಲಿದೆ. ಮಕ್ಕಳ ಶಾಲಾ ಪ್ರವೇಶಾತಿಯನ್ನು ದಾಖಲಾತಿಯನ್ನು ಮೇ 16 ರಿಂದ ಆರಂಭಿಸಿ ಜುಲೈ 31ರೊಳಗಾಗಿ ಮುಕ್ತಾಯಗೊಳಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ವಿವಿ: ಸಿಂಡಿಕೇಟ್ ಸದಸ್ಯರ ನಾಮನಿರ್ದೇಶನ ಹಿಂಪಡೆದ ಸರ್ಕಾರದ ಆದೇಶಕ್ಕೆ ತಡೆ