ಬೆಂಗಳೂರು: ವಾರದಿಂದ ಬೆಂಗಳೂರು ನಗರ ಮುಸುಕಿನ ವಾತಾವರಣದಿಂದ ಕೂಡಿದ್ದು, ಗಂಟೆಗೆ ಒಮ್ಮೆಯಂತೆ ಆಗಾಗ ಮಳೆರಾಯ ಎಂಟ್ರಿ ಕೊಡುತ್ತಿದ್ದಾನೆ. ದಿಢೀರ್ ಅಂತ ಸುರಿಯುತ್ತಿರುವ ಮಳೆಯಿಂದಾಗಿ ಈಗ ನಗರದೆಲ್ಲೆಡೆ ಡೆಂಗ್ಯೂ ಭೀತಿ ಹೆಚ್ಚಿದೆ.
ಕಳೆದ ಹಲವು ತಿಂಗಳಿಂದ ಡೆಂಗ್ಯೂ ಜ್ವರದ ಪ್ರಕರಣಗಳು ಕಡಿಮೆಯಾಗಿದ್ದವು. ಈಗ ಸುರಿಯುತ್ತಿರುವ ಮಳೆಯಿಂದಾಗಿ ಮತ್ತೆ ಡೆಂಗ್ಯೂ, ಚಿಕನ್ ಗುನ್ಯಾ ಹರಡುವ ಆತಂಕ ಶುರುವಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದು, ಡೆಂಗ್ಯೂ ಪ್ರಕರಣ ಅಧಿಕವಿರುವ ತುಮಕೂರು, ದಾವಣಗೆರೆ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಕಲಬುರಗಿ, ಯಾದಗಿರಿ, ಬೀದರ್, ಕೊಪ್ಪಳ, ಹಾಸನ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.
ಡೆಂಗ್ಯೂ, ಚಿಕನ್ ಗುನ್ಯಾ ಹರಡುವ ಈಡೀಸ್ ಸೊಳ್ಳೆಗಳು ಸಂಗ್ರಹವಾದ ನೀರಿನಲ್ಲಿ ಉತ್ಪತ್ತಿಯಾಗುತ್ತವೆ. ಹೀಗಾಗಿ ಮಳೆ ಬಂದಾಗ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಹಾಗೂ ನೀರಿನ ಸಂಗ್ರಹಣೆಗಳನ್ನು ಸಂಪೂರ್ಣವಾಗಿ ಮುಚ್ಚಿ, ಸೊಳ್ಳೆ ಉತ್ಪತ್ತಿಯನ್ನು ತಡೆಗಟ್ಟುವಂತೆ ಆರೋಗ್ಯ ಇಲಾಖೆಯ ಅಧಿಕಾರಿ ಷರೀಫ್ ತಿಳಿಸಿದ್ದಾರೆ.
ಡೆಂಗ್ಯೂ ಹರಡದಂತೆ ಎಚ್ಚರಿಕೆ ವಹಿಸುವುದು ಹೇಗೆ?
ಇನ್ನು ಡೆಂಗ್ಯೂ ನಿಯಂತ್ರಣ ಮಾಡಬೇಕು ಅಂದರೆ ಹೂವಿನ ಕುಂಡ, ಬಿಸಾಕಿದ ಟೈರ್ ಹೀಗೆ ಮನೆಯ ಸುತ್ತಮುತ್ತ ಬಿಸಾಡಿದ ತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ಹಾಗೂ ನೀರು ಸಂಗ್ರಹಿಸುವ ತೊಟ್ಟಿಯನ್ನು ಶುಚಿಗೊಳಿಸಿ ಸೊಳ್ಳೆಗಳು ಮೊಟ್ಟೆ ಇಡಲು ಅವಕಾಶವಿರದಂತೆ ನೋಡಿಕೊಳ್ಳಬೇಕು.