ಬೆಂಗಳೂರು: ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗುರುವಾರ(ಇಂದು) ಬೆಳಗ್ಗೆ 11 ಗಂಟೆಗೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರೈತರು ಮತ್ತು ಜನಸಾಮಾನ್ಯರ ಸಮಾವೇಶ ಉದ್ಘಾಟಿಸುವ ಮೂಲಕ ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷದ ಚುನಾವಣಾ ರಣ ಕಹಳೆ ಊದಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ದೆಹಲಿ ಮಾದರಿಯಿಂದ ಪ್ರೇರಣೆ ಪಡೆದಿರುವ ರಾಜ್ಯ ರೈತ ಸಂಘವು ಸಿಎಂ ಕೇಜ್ರಿವಾಲ್ ಅವರಿಗೆ ವಿಶೇಷ ಆಹ್ವಾನ ನೀಡಿದೆ. ದೆಹಲಿ ಸಿಎಂ ಆಗಮಿಸಿ ರೈತರು ಮತ್ತು ಜನಸಾಮಾನ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಾಡಿನ ಸುಮಾರು ಐವತ್ತು ಸಾವಿರ ರೈತರು ಮತ್ತು ಜನಸಾಮಾನ್ಯರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಇದೊಂದು ಐತಿಹಾಸಿಕ ದಿನವಾಗಲಿದೆ ಎಂದು ಆಪ್ ಕಾರ್ಯಕರ್ತರು ಮತ್ತು ರೈತ ಮುಖಂಡರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ: ಅರವಿಂದ ಕೇಜ್ರಿವಾಲ್ ಐಷಾರಾಮಿ ದುಬಾರಿ ಹೋಟೆಲ್ನಲ್ಲಿ ಉಳಿದುಕೊಳ್ಳುತ್ತಿರುವುದು ವಿವಾದದ ಕೇಂದ್ರ ಬಿಂದುವಾಗಿದೆ. ಜನಸಾಮಾನ್ಯರ ಪ್ರತಿನಿಧಿ ಎಂದು ಹೇಳಿಕೊಳ್ಳುವ ದೆಹಲಿ ಮುಖ್ಯಮಂತ್ರಿ ಲಕ್ಷ ಲಕ್ಷ ಖರ್ಚು ಮಾಡಿ ಸ್ಟಾರ್ ಹೋಟೆಲ್ನಲ್ಲಿ ಉಳಿದುಕೊಳ್ಳುತ್ತಿರುವ ವಿಚಾರಕ್ಕೆ ಪರ-ವಿರೋಧದ ಚರ್ಚೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.
ಟ್ವಿಟರ್ ಅಂಗಳದಲ್ಲಿ ಕೇಜ್ರಿವಾಲ್ ಹವಾ: ಏಪ್ರಿಲ್ 21ಕ್ಕೆ ಕೇಜ್ರಿವಾಲ್ ಅವರು ಬೆಂಗಳೂರಿಗೆ ಭೇಟಿ ನೀಡಿ, ಬೃಹತ್ ಸಭೆಯಲ್ಲಿ ಮಾತನಾಡುವುದರ ಬಗ್ಗೆ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ಮತ್ತು ಬೆಂಬಲಿಗರು #Kejriwal_ಬರ್ತಿದಾರೆ_ದಾರಿಬಿಡಿ ಎಂಬ ಅಭಿಯಾನ ನಡೆಸಿದ್ದು, ಭಾರತದ ರಾಜಕೀಯ ಟ್ರೆಂಡಿಂಗ್ನಲ್ಲಿ ಅದು ಮೂರನೇ ಸ್ಥಾನದಲ್ಲಿ ಓಡುತ್ತಿದೆ. ಟ್ವಿಟರ್ ಅಂಗಳದಲ್ಲಿ ಕೇಜ್ರಿವಾಲ್ ಅವರನ್ನು ಸ್ವಾಗತಿಸಿ ಸಾವಿರಾರು ಟ್ವೀಟ್ಗಳು ಕಾಣುತ್ತಿವೆ. ಕೆಲವರು ಭ್ರಷ್ಟರಿಗೆ ಇದು ಅಂತ್ಯ ಅಂತ ಹೇಳಿ ಟ್ವೀಟ್ ಮಾಡಿದ್ದರೆ, ಕೆಲವರು ವೆಲ್ಕಮ್ ಟು ಕರ್ನಾಟಕ, ನಿಮ್ಮ ಅಗತ್ಯ ಇದೆ ಎಂದು ಟ್ವೀಟ್ ಮಾಡಿದ್ದಾರೆ.
ಒಟ್ಟಾರೆ ನೆಟ್ಟಿಗರು ಕೇಜ್ರಿವಾಲ್ ಅವರನ್ನು ಭ್ರಷ್ಟರಿಗೆ ಸಿಂಹಸ್ವಪ್ನ ಮತ್ತು ಭ್ರಷ್ಟಾಚಾರ ಹಾಗು ದುರಾಡಳಿತದಿಂದ ಬಸವಳಿದ ಜನತೆಗೆ ಆಶಾಕಿರಣ ಎಂದೂ ಬಣ್ಣಿಸಿದ್ದಾರೆ. ವಾರದ ಹಿಂದೆ ಜನತೆಯ ಕಮಿಷನರ್ ಎಂದೇ ಖ್ಯಾತಿ ಪಡೆದಿರುವ ಭಾಸ್ಕರ್ ರಾವ್ ಎಎಪಿ ಸೇರಿದ್ದು ಸುದ್ದಿಯಾಗಿತ್ತು. ಇಂದಿನ ಕಾರ್ಯಕ್ರಮದಲ್ಲಿ ಇನ್ನಾರು ಘಟಾನುಘಟಿಗಳು ಪಕ್ಷ ಸೇರುತ್ತಾರೆ ಮತ್ತು ಕರ್ನಾಟಕದ ರಾಜಕಾರಣದ ವಿಚಾರವಾಗಿ ಕೇಜ್ರಿವಾಲ್ ಏನು ಹೇಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಕಾಂಗ್ರೆಸ್ಗೆ 'ಪಿಕೆ' ಪೂರ್ಣಕಾಲದ ಮ್ಯಾನೇಜರ್ ಅಥವಾ ಸಲಹೆಗಾರ?: ಸಭೆಗಳ ಮೇಲೆ ಸಭೆ ನಡೆಸುತ್ತಿರುವ ಸೋನಿಯಾ