ಬೆಂಗಳೂರು: ಮತಾಂತರ ನಿಷೇಧ ಮಸೂದೆಗೆ ಸುಗ್ರೀವಾಜ್ಞೆ ಮೂಲಕ ಅನುಮೋದನೆ ನೀಡಿ, ಅಧ್ಯಾದೇಶದ ಮೂಲಕ ರಾಜ್ಯಪಾಲರಿಗೆ ರವಾನಿಸಲು ನಿರ್ಧಾರ ಮಾಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ರಾಜ್ಯ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಠಿ ನಡೆಸಿ ತಿಳಿಸಿದ್ದಾರೆ.
ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಅಗತ್ಯ ಮೂಲ ಸೌಲಭ್ಯಗಳ ಅಭಿವೃದ್ಧಿ ಉನ್ನತೀಕರಣಗೊಳಿಸುವ 100 ಕೋಟಿ ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬಲ್ಲೂರ (ಜೆ) ಗ್ರಾಮದಲ್ಲಿ ಸಿಐಪಿಇಟಿ (CIPET) ಸಂಸ್ಥೆಯ ಕೌಶಲ್ಯ ಮತ್ತು ತಾಂತ್ರಿಕ ನೆರವು ಕೇಂದ್ರ (CSTS)ವನ್ನು 89.94 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಸ್ಥಾಪಿಸಲು ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಕೈಗೆತ್ತಿಕೊಂಡಿರುವ ಅಪೂರ್ಣಗೊಂಡಿರುವ ಉಗ್ರಾಣಗಳ ಮತ್ತು ಮೂಲ ಕಾಮಗಾರಿಗಳನ್ನು ಪೂರ್ಣಗೊಳಿಸಲು 862.37 ಕೋಟಿ ರೂ. ಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ಸಿಕ್ಕಿದೆ. ಕರ್ನಾಟಕ ಸಿವಿಲ್ ಸೇವಾ (ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯದಿಂದ ಮೃತಪಟ್ಟ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ವ್ಯಕ್ತಿಯ - ಅವಲಂಬಿತರಿಗೆ ಅನುಕಂಪದ ಆಧಾರದ ನೇಮಕಾತಿ) (ವಿಶೇಷ) (ತಿದ್ದುಪಡಿ) ನಿಯಮಗಳು, 2022ಕ್ಕೆ ಅನುಮೋದನೆ ನೀಡುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಮುಖ್ಯಮಂತ್ರಿ ಅವರ ಅಧಿಕಾರ: ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ನೇಮಕಾತಿ ಕುರಿತು ಮಾತನಾಡಿದ ಅವರು, ಪ್ರಸ್ತುತ ಅಧಿಕಾರದಲ್ಲಿರುವ ರವಿಕುಮಾರ್ ಈ ತಿಂಗಳ ಅಂತ್ಯದಲ್ಲಿ ನಿವೃತ್ತಿಯಾಗಲಿದ್ದಾರೆ. ಹಾಗಾಗಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿಕೊಳ್ಳಲು ಮುಖ್ಯಮಂತ್ರಿಯವರಿಗೆ ಅಧಿಕಾರ ನೀಡಲಾಗಿದೆ. ಮುಖ್ಯ ಕಾರ್ಯದರ್ಶಿ ಹುದ್ದೆಗೆ 9 ಜನ ಇದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಖಾಸಗಿ ಭದ್ರತಾ ಸಂಸ್ಥೆಗಳ ನಿಯಮ 2022ಕ್ಕೆ ಕೂಡ ಅನುಮೋದನೆ ನೀಡಲಾಗಿದೆ. ಕರ್ನಾಟಕ ಸೈಬರ್ ಭದ್ರತಾ ನೀತಿ 2022-27ಕ್ಕೆ ಅನುಮೋದನೆ ನೀಡಲು ತೀರ್ಮಾನಿಸಲಾಗಿದೆ. ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ 2022ಕ್ಕೆ ಕೂಡ ಅನುಮೋದನೆ ಲಭಿಸಿದೆ ಎಂದರು.
ಇದನ್ನೂ ಓದಿ: ಸುಗ್ರೀವಾಜ್ಞೆ ಮೂಲಕ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ನಿರ್ಧಾರ