ಬೆಂಗಳೂರು : ವೈಟ್‌ಫೀಲ್ಡ್ ಸಮೀಪದ ಕುಂದಲಹಳ್ಳಿಯ ಸಿಎಂಆರ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜೀಸ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸಿಎಎ ಕುರಿತಾದ ಸಂವಾದಕ್ಕೆ ನೂರಾರು ಐಟಿಬಿಟಿ ಕಂಪನಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ, ಭಾರತದಲ್ಲಿ ಸಿಎಎ ಜಾರಿಗೆ ಬಂದರೆ ಅದರ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ಚರ್ಚೆ ಮಾಡಲಾಯಿತು.
ಮಧ್ಯಪ್ರದೇಶದ ರಾಜ್ಯಸಭಾ ಸದಸ್ಯ ಸ್ವಪ್ನ ದಾಸ್ ಗುಪ್ತ ಮಾತನಾಡಿ, ನೆರೆಯ ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾ ದೇಶಗಳಲ್ಲಿ ಧರ್ಮದ ಆಧಾರದ ಮೇಲೆ ಕಿರುಕುಳ ಅನುಭವಿಸಿ ಭಾರತಕ್ಕೆ ವಲಸೆ ಬಂದು ಆರು ವರ್ಷ ಇಲ್ಲಿ ವಾಸವಾಗಿದ್ದರೆ ಪೌರತ್ವ ಪಡೆಯಬಹುದು. 2014 ರ ಡಿಸೆಂಬರ್ 31ರ ನಂತರ ವಲಸೆ ಬಂದ ಮುಸ್ಲಿಮೇತರ ನಿರಾಶ್ರಿತರು ಭಾರತದ ಪೌರತ್ವ ಪಡೆಯಬಹುದಾಗಿದೆ. ಸಾರ್ವಜನಿಕರಿಗೆ ಪೌರತ್ವದ ಬಗ್ಗೆ ಗೊಂದಲವಿದೆ. ಸ್ಥಳೀಯ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯ ಪ್ರತಿಯೊಬ್ಬರು ಮಾಡಬೇಕು ಎಂದರು.
ಜಮ್ಮು-ಕಾಶ್ಮೀರದ ಹಿರಿಯ ಪತ್ರಕರ್ತ ರಮೇಶ್ ಕುಮಾರ್ ಮೊಟ್ಟೊ ಮಾತನಾಡಿ, ಭಾರತದ ಸಂವಿಧಾನದ ಪ್ರಕಾರ ಕಾನೂನುಬದ್ಧ ಪಾಸ್‌ಪೋರ್ಟ್ ಅಥವಾ ಸೂಕ್ತ ದಾಖಲೆ ಇಲ್ಲದೆ ಭಾರತಕ್ಕೆ ನುಸುಳಿದವರು ಅಕ್ರಮ ವಲಸಿಗರಾಗಿದ್ದಾರೆ. ಬಿಜೆಪಿ ಸರ್ಕಾರ ಒಂದಿಲ್ಲೊಂದು ಕಾನೂನುಗಳನ್ನು ಮಾಡುವ ಮೂಲಕ ಮಹತ್ವದ ಬದಲಾವಣೆ ಬಯಸುತ್ತಿದೆ. ಪೌರತ್ವ ಕಾಯ್ದೆಯನ್ನು ಸೂಕ್ತವಾಗಿ ಯಾರಿಗೂ ತೊಂದರೆ ಆಗದಂತೆ ಅನುಷ್ಠಾನಗೊಳಿಸಲು ಮುಂದಾಗಿದೆ. ಪೌರತ್ವದ ನಿಲುವುಗಳು ಎಲ್ಲ ಜನರಿಗೆ ತುಂಬಾ ಅನುಕೂಲವಿದೆ. ಆದರೆ, ಇದನ್ನು ರಾಜಕೀಯಕ್ಕಾಗಿ ವಿರೋಧಿಸುವವರು ಹೆಚ್ಚಾಗಿದ್ದಾರೆ ಎಂದರು.
ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಮಹಾದೇವಪುರ ಕ್ಷೇತ್ರದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ವಲಸಿಗರನ್ನು ಕಾನೂನು ಮೂಲಕ ಹೊರ ಹಾಕುವ ಕೆಲಸ ಮಾಡುತ್ತಿದ್ದೇವೆ. ಕ್ಷೇತ್ರದಲ್ಲಿ ವಾಸಿಸುತ್ತಿರುವ ಬಾಂಗ್ಲಾ ಅಕ್ರಮ ವಲಸಿಗರನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾದಾಗ ಕೆಲ ಎನ್ಜಿಒಗಳು ಕೋರ್ಟ್ನಲ್ಲಿ ದಾವೆ ಹೂಡಿದ್ದವು. ಬೆಂಗಳೂರಿನಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ತಡೆಯಲು ಪ್ರತಿಯೊಬ್ಬರು ಸಹಕರಿಸಬೇಕು. ದೇಶದ್ರೋಹ ಯಾರೇ ಮಾಡಿದರೂ ಅವರ ವಿರುದ್ಧ ಹೋರಾಡಲು ಪ್ರತಿಯೊಬ್ಬರು ಸಿದ್ಧರಾಗಿರಬೇಕು ಎಂದರು.
ರಾಜ್ಯಸಭಾ ಸದಸ್ಯ ಕೆ ಸಿ ರಾಮಮೂರ್ತಿ, ಮಹದೇವಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ಮನೋಹರ್ ರೆಡ್ಡಿ, ಪಾಲಿಕೆ ಸದಸ್ಯರಾದ ಶ್ವೇತಾ ವಿಜಯ್ ಕುಮಾರ್, ಪುಷ್ಪ ಮಂಜುನಾಥ್ ಸೇರಿ ಐಟಿಬಿಟಿ ಕಂಪನಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.