ದೇವನಹಳ್ಳಿ: ಕಲ್ಲು ಕ್ವಾರಿಯ ನೀರಿನ ಹೊಂಡದಲ್ಲಿ ನಾಯಿ ತೊಳೆಯಲು ಹೋದ ಅಣ್ಣ-ತಂಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರು ಬಳಿ ನಡೆದಿದೆ.
ಜೆನಿಫರ್ (17), ಪ್ರೇಮಕುಮಾರ್ (21) ಮೃತರು ಎಂದು ತಿಳಿದು ಬಂದಿದೆ. ಜೆನಿಫರ್ ತಮಿಳುನಾಡಿನಿಂದ ಅಣ್ಣ ಪ್ರೇಮಕುಮಾರ್ ಮನೆಗೆ ಬಂದಿದ್ದಳು. ಕುಟುಂಬದವರೊಂದಿಗೆ ನಾಯಿ ಫಾರ್ಮ್ ನೋಡಲು ಹೋಗುವಾಗ ಕಲ್ಲು ಕ್ವಾರಿಯ ನೀರಿನಲ್ಲಿ ತಮ್ಮ ನಾಯಿಯನ್ನು ತೊಳೆಯಲು ತೆರಳಿದ್ದಾಳೆ. ಈ ಸಂದರ್ಭದಲ್ಲಿ ಕಾಲು ಜಾರಿ ಜೆನಿಫರ್ ನೀರಿಗೆ ಬಿದ್ದಿದ್ದಾಳೆ.
ಓದಿ-ಕಾರು ಡಿಕ್ಕಿಯಾಗಿ ಬಸ್ಗಾಗಿ ಕಾಯುತ್ತಿದ್ದ ಇಬ್ಬರ ಸಾವು
ತಕ್ಷಣವೇ ಆಕೆಯನ್ನು ರಕ್ಷಿಸಲು ಪ್ರೇಮಕುಮಾರ್ ನೀರಿಗೆ ಧುಮುಕಿದ್ದಾನೆ. ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ. ಇಬ್ಬರನ್ನು ಕಾಪಾಡಲು ಪ್ರೇಮಕುಮಾರ್ ತಾಯಿ ನೀರಿಗಿಳಿದಿದ್ದಾಳೆ. ಆದ್ರೆ ಸ್ಥಳದಲ್ಲಿದ್ದವರು ಆಕೆಗೆ ವೇಲ್ ನೀಡಿ ರಕ್ಷಣೆ ಮಾಡಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಮೃತದೇಹ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದರು. ಆದ್ರೆ ಕತ್ತಲಾದ ಕಾರಣ ಹಾಗೂ ಕ್ವಾರಿಯ ಹೊಂಡದ ಆಳ 60 ಅಡಿ ಆಳ ಇರುವ ಹಿನ್ನೆಲೆ ನಾಳೆ ಬೆಳಗ್ಗೆ ಕಾರ್ಯಾಚರಣೆ ಆರಂಭಿಸುವುದಾಗಿ ತಿಳಿಸಿದ್ದಾರೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.