ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಿಭಾಗ ಡಿಸಿಪಿ ವಿನಾಯಕ್ ಪಾಟೀಲ್ ಅವರು ಬೆಂಗಳೂರು ಕಮಿಷನರ್ಗೆ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ಕರ್ತವ್ಯ ಲೋಪ ಹಾಗೂ ಭದ್ರತಾ ವೈಫಲ್ಯದ ಬಗ್ಗೆ ಉಲ್ಲೇಖ ಮಾಡಿದ್ದು, ಗೃಹ ಸಚಿವರ ನಿವಾಸಕ್ಕೆ ಸೂಕ್ತ ರೀತಿಯಲ್ಲಿ ಭದ್ರತೆ ಕಲ್ಪಿಸದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಗೃಹ ಸಚಿವರ ನಿವಾಸದ ಬಳಿ ಸಿಎಆರ್ ಪೊಲೀಸರು ಸೇರಿ ಐವರಿಂದ ಮಾತ್ರ ಭದ್ರತೆಯಿತ್ತು. ಇದೇ ವೇಳೆ, ಗೃಹ ಸಚಿವರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಸಿಎಆರ್ ಕಾನ್ಸ್‌ಟೇಬಲ್ ಜೆಸಿ ನಗರ ಠಾಣೆಗೆ ಮಾಹಿತಿ ನೀಡಿದ ಮೇಲೆ ಪೊಲೀಸರು ಅಲರ್ಟ್ ಆಗಿದ್ದಾರೆ.
ಆದರೆ, ಕಳೆದ ಹತ್ತು ದಿನಗಳ ಹಿಂದೆ ಜೆಸಿ ನಗರ ಇನ್ಸ್‌ಪೆಕ್ಟರ್ ಟ್ರಾನ್ಸ್‌ಫರ್ ಆಗಿದ್ದು, ಹೊಸ ಇನ್ಸ್‌ಪೆಕ್ಟರ್ ಇನ್ನೂ ನಿಯೋಜನೆ ಆಗಿರಲಿಲ್ಲ. ಈ ವೇಳೆ ಸಬ್ ಇನ್ಸ್ಪೆಕ್ಟರ್ಗೆ ಜವಾಬ್ದಾರಿ ನೀಡಲಾಗಿತ್ತು. ಎಬಿವಿಪಿ ಪ್ರತಿಭಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲ. ಘಟನೆ ನಡೆದಾಗ ಠಾಣೆಯಲ್ಲಿ ಸೂಕ್ತ ಪೊಲೀಸ್ ಪೋರ್ಸ್ ಸಹ ಇರಲಿಲ್ಲ. ಜವಾಬ್ದಾರಿ ಹೊತ್ತಿದ್ದ ಸಬ್ ಇನ್ಸ್‌ಪೆಕ್ಟರ್ ಸ್ಥಳಕ್ಕೆ ಬರಲು ತಡವಾಗಿತ್ತು. ಅಷ್ಟರಲ್ಲಿ ಎಬಿವಿಪಿ ಕಾರ್ಯಕರ್ತರು ರಂಪಾಟ ಮಾಡಿದ್ದರು.
ಮೇಲ್ನೋಟಕ್ಕೆ ಭದ್ರತಾ ವೈಫಲ್ಯ ಹಾಗೂ ಪ್ರತಿಭಟನೆ ಮಾಹಿತಿ ಕಲೆ ಹಾಕುವಲ್ಲಿ ಪೊಲೀಸರ ವಿಳಂಬ ಕಾರಣ ಎಂದು ತನಿಖೆ ನಡೆಸಿ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರಿಗೆ ಡಿಸಿಪಿ ವಿನಾಯಕ ಪಾಟೀಲ್ ವರದಿ ನೀಡಿದ್ದಾರೆ.
(ಇದನ್ನೂ ಓದಿ: ಪ್ರವೀಣ್ ಹತ್ಯೆ ಖಂಡಿಸಿ ಗೃಹ ಸಚಿವರ ನಿವಾಸಕ್ಕೆ ಎಬಿವಿಪಿ ಮುತ್ತಿಗೆ, ಲಘು ಲಾಠಿ ಚಾರ್ಜ್)