ಬೆಂಗಳೂರು : ದುಡಿಯುವ ವಯಸ್ಕರನ್ನು ಕಳೆದುಕೊಂಡ ಬಿಪಿಎಲ್ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ನೀಡುವ ಯೋಜನೆಯಡಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಹೆಸರಿಗೆ ಪರಿಹಾರದ ಹಣವನ್ನು ಠೇವಣಿ ಇರಿಸಲಾಗುತ್ತದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಿಂದ ಕೊರೊನಾ ಸಂಕಷ್ಟ ಎದುರಾಗಿದೆ. ಹಾಗಾಗಿ, ಬಿಪಿಎಲ್ ಕುಟುಂಬದ ದುಡಿಯುವ ವ್ಯಕ್ತಿ ನಿಧನವಾದಲ್ಲಿ ಆ ಕುಟುಂಬಕ್ಕೆ ಸಿಎಂ ಒಂದು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಸಾಮಾಜಿಕ ಕಾಳಜಿಯಿಂದ ಇದನ್ನು ಘೋಷಣೆ ಮಾಡಿದ್ದಾರೆ. ಬಡವರಿಗೆ ನೆರವಾಗುವ ಈ ಕಾರ್ಯಕ್ರಮ ಸ್ವಾಗತಾರ್ಹ ಎಂದರು.
ಚಿಕ್ಕ ಮಕ್ಕಳು ನಿಧನರಾಗಿದ್ದರೆ, ದುಡಿಯುವ ವ್ಯಕ್ತಿ ನಿಧನರಾದಲ್ಲಿ, ತಂದೆ-ತಾಯಿ ಇಬ್ಬರು ನಿಧನರಾಗಿದ್ದರೆ, ಅವರ ಕುಟುಂಬದಲ್ಲಿನ ಚಿಕ್ಕ ಮಕ್ಕಳ ಹೆಸರಿಗೆ ಯೋಜನೆಯ ಹಣವನ್ನು ಠೇವಣಿ ಮಾಡುವುದಾಗಿ ಸಿಎಂ ಹೇಳಿದ್ದಾರೆ. 250-300 ಕೋಟಿ ಬೇಕಾಗಲಿದೆ ಎಂದಿದ್ದಾರೆ. ಇನ್ನೂ ಹೆಚ್ಚಾದರೂ ಅದನ್ನು ಭರಿಸಲಾಗುತ್ತದೆ. ಕಳಕಳಿಯಿಂದ ಮಾಡಿದ ಈ ಕಾರ್ಯಕ್ರಮ ಎರಡೂ ಅಲೆಗೂ ಅನ್ವಯವಾಗಲಿದೆ ಎಂದರು.
ರಾಜ್ಯಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬರುತ್ತಿದ್ದಾರೆ. ನನಗೂ ಸಭೆಗೆ ಬರುವಂತೆ ಕರೆದಿದ್ದಾರೆ. ಆದರೆ, ಏನು ಅಜೆಂಡಾ ಅಂತ ಗೊತ್ತಿಲ್ಲ. ಅಜೆಂಡಾ ಬಂದ್ಮೇಲೆ ಹೇಳುತ್ತೇನೆ ಎಂದು ಡಿಸಿಎಂ ಕಾರಜೋಳ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಕೋವಿಡ್ನಿಂದ ಮೃತಪಟ್ಟವರ ಕುಟುಂಬಗಳಿಗೆ 1 ಲಕ್ಷ ರೂ. ಪರಿಹಾರ: ಸಿಎಂ ಘೋಷಣೆ