ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ ವಶದಲ್ಲಿರುವ ಬೆಡ್ ದರ ಪರಿಷ್ಕರಣೆ, ಕೂಡಲೇ 5 ಲಕ್ಷ ರೆಮ್ಡೆಸಿವಿರ್ ಡೋಸ್ ಖರೀದಿ ಹಾಗೂ ಅಗತ್ಯವಿದ್ದಷ್ಟು ರಾಟ್ ಕಿಟ್‌ಗಳನ್ನು ತಕ್ಷಣವೇ ಖರೀದಿ ಮಾಡುವ ಮಹತ್ವದ ನಿರ್ಧಾರಗಳನ್ನು ಕೋವಿಡ್ ಕಾರ್ಯಪಡೆಯ ಸಭೆಯಲ್ಲಿ ಕೈಗೊಳ್ಳಲಾಗಿದೆ.
ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಇಂದು ವಿಧಾನಸೌಧದಲ್ಲಿ ಕಾರ್ಯಪಡೆ ಸಭೆ ನಡೆಸಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಅವರು, ದೇಶಿಯ ಅಥವಾ ಜಾಗತಿಕವಾಗಿ ಯಾವುದೇ ಕಂಪನಿ ಆಗಿರಲಿ. ಇವತ್ತೇ ರೆಮ್ಡೆಸಿವಿರ್ ಖರೀದಿಗೆ ಜಾಗತಿಕ ಟೆಂಡರ್ ಕರೆಯಿರಿ ಎಂದು ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೆಮ್ಡೆಸಿವಿರ್ ಕೊರತೆ ಆಗಬಾರದು:
ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ರೆಮ್ಡೆಸಿವಿರ್ ಕೊರತೆ ಉಂಟಾಗಬಾರದು. ಕೂಡಲೇ 5 ಲಕ್ಷ ಡೋಸ್ ಆಮದು ಮಾಡಲು ಜಾಗತಿಕ ಟೆಂಡರ್ ಕರೆಯಿರಿ. ಯಾವುದೇ ಕಂಪನಿಯಾದರೂ ಪರವಾಗಿಲ್ಲ. ವಿದೇಶದಿಂದ ಆಮದು ಮಾಡಿಕೊಂಡರೂ ಸರಿ. ರೆಮ್ಡೆಸಿವಿರ್ ಕೊರತೆಯಿಂದ ಜೀವ ಹೋಯಿತು ಎನ್ನುವ ಮಾತು ಇನ್ನು ಕೇಳಿರಬಾರದು. ಇವತ್ತೇ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಎಂದು ಡಿಸಿಎಂ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಖಾಸಗಿ ಆಸ್ಪತ್ರೆಗಳ ಸರ್ಕಾರದ ಬೆಡ್ ದರ ಪರಿಷ್ಕರಣೆ :
ಇದೇ ಸಭೆಯಲ್ಲಿ ಸರ್ಕಾರ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಹೊಂದಿರುವ ಹಾಸಿಗೆಗಳ ಪ್ರತಿದಿನದ ದರವನ್ನು ಪರಿಷ್ಕರಣೆ ಮಾಡುವ ನಿರ್ಧಾರವನ್ನೂ ಕೈಗೊಳ್ಳಲಾಯಿತು. ಗಂಭೀರವಲ್ಲದ ಕೋವಿಡ್ ಸೋಂಕಿತರ ಬೆಡ್ ದರ ಪ್ರತಿದಿನಕ್ಕೆ ಈಗ 5,200 ರೂ. ಇದ್ದು, ಇದರಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ. ಆಕ್ಸಿಜನಕ ಯುಕ್ತ ಬೆಡ್ ದರವನ್ನು ದಿನಕ್ಕೆ 7,000 ದಿಂದ 8,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಐಸಿಯುನಲ್ಲಿ ವೆಂಟಿಲೇಟರ್ ಹೊರತಾದ ಬೆಡ್ ದರವನ್ನು 8,500ರಿಂದ 9,750 ರೂ.ಗಳಿಗೆ ಹಾಗೂ ಐಸಿಯುನಲ್ಲಿ ವೆಂಟಿಲೇಟರ್ ಸಹಿತ ಬೆಡ್ ದರವನ್ನು 10,000ರಿಂದ 11,500 ರೂ.ಗಳಿಗೆ ಏರಿಸಲಾಗಿದೆ. ಹೊಸ ದರಗಳು ಯಾವಾಗಿನಿಂದ ಜಾರಿಗೆ ಬರುತ್ತವೆ ಎಂಬುದಕ್ಕೆ ಸರಕಾರ ಶೀಘ್ರವೇ ಆದೇಶ ಹೊರಡಿಸಲಿದೆ ಎಂದು ಡಿಸಿಎಂ ಸಭೆಯಲ್ಲಿ ಪ್ರಕಟಿಸಿದರು.
ಹೆಚ್ಚು ವಸೂಲಿ ಮಾಡಿದರೆ ಗೂಂಡಾ ಕಾಯ್ದೆಯಡಿ ಕ್ರಮ:
ಯಾವುದೇ ಖಾಸಗಿ ಆಸ್ಪತ್ರೆ ಬೆಡ್, ಔಷಧ, ಆಕ್ಸಿಜನ್, ರೆಮ್ಡೆಸಿವಿರ್ ಸೇರಿದಂತೆ ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚಿನ ಹಣ ಸುಲಿಗೆ ಮಾಡಿದರೆ ಗೂಂಡಾ ಕಾಯ್ದೆ ಅಡಿ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು ಎಂದು ಡಿಸಿಎಂ ಎಚ್ಚರಿಕೆ ನೀಡಿದರು.
ಯಾರಾದರೂ ಹೆಚ್ಚು ಶುಲ್ಕ ವಸೂಲಿ ಮಾಡಿದರೆ 112 ಹೆಲ್ಪ್‌ಲೈನ್‌ಗೆ ಕರೆ ಮಾಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಲಭ್ಯವಿರುವ ತಮ್ಮ ಹಾಗೂ ಸರ್ಕಾರದ ಬೆಡ್‌ಗಳ ಮಾಹಿತಿಯನ್ನು ಸುವರ್ಣ ಆರೋಗ್ಯ ಟ್ರಸ್ಟ್ ಪೋರ್ಟಲ್‌ನಲ್ಲಿ ಅಪ್ಡೇಟ್ ಮಾಡಬೇಕು. ಹಾಸಿಗೆಗಳ ಲೈವ್ ಸ್ಟೇಟಸ್ ಇರಬೇಕು. ಅಧಿಕಾರಿಗಳು ಇದರ ಮೇಲೆ ನಿಗಾ ಇಡಬೇಕು ಎಂದು ಡಿಸಿಎಂ ತಾಕೀತು ಮಾಡಿದರು.
ಇದೇ ವೇಳೆ, ಖಾಸಗಿ ಆಸ್ಪತ್ರೆಗಳ ಬಿಲ್ ಬಾಕಿ ಇದ್ದರೆ ತಕ್ಷಣವೇ ಚುಕ್ತಾ ಮಾಡಿ. ಹಾಗೆಯೇ ಕೋವಿಡ್ ಯೋಧರಾಗಿ ಕೆಲಸ ಮಾಡುತ್ತಿರುವ ಯಾರ ವೇತನವೂ ತಡವಾಗಬಾರದು ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಡಾ.ಅಶ್ವತ್ಥ ನಾರಾಯಣ ಸೂಚನೆ ಕೊಟ್ಟರು.
ಲಸಿಕೆ ಖರೀದಿಗೆ ಸೂಚನೆ :
18 ರಿಂದ 44 ವರ್ಷ ವಯಸ್ಸಿನ ಎಲ್ಲರಿಗೂ ವ್ಯಾಕ್ಸಿನೇಷನ್ ಮಾಡುವ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ. ಲಸಿಕೆ ಅಭಾವದಿಂದ ಹೀಗಾಗಿದೆ. ಎಲ್ಲರಿಗೂ ಸರ್ಕಾರವೇ ಲಸಿಕೆ ಕೊಡಬೇಕಾಗಿದೆ. ರಾಜ್ಯದಲ್ಲಿ 3.26 ಕೋಟಿ ಜನರಿಗೆ ಲಸಿಕೆ ನೀಡಬೇಕಾಗಿದ್ದು, ಇವರಿಗೆ ಎರಡು ಡೋಸ್ ನೀಡಲು 6.52 ಕೋಟಿ ರೂ. ಅಗತ್ಯವಿದೆ. ಕೇಂದ್ರ ಸರಕಾರದಿಂದ 3 ಲಕ್ಷ ಡೋಸ್ ಕೋವಿಶೀಲ್ಡ್ ಬಂದಿದ್ದು, ಮೇ ಎರಡನೇ ವಾರಕ್ಕೆ 15 ಲಕ್ಷ ಡೋಸ್ ಬರುತ್ತದೆ ಎಂದು ಸಭೆಗೆ ಡಿಸಿಎಂ ಮಾಹಿತಿ ನೀಡಿದರು.
ತಕ್ಷಣವೇ ಲಸಿಕೆ ಅಭಿಯಾನದ ಕಾರ್ಯತಂತ್ರವನ್ನು ಬದಲಿಸಬೇಕು. ಲಸಿಕೆಯನ್ನು ಯಾರಿಗೆ ನೀಡಬೇಕು ಎಂಬ ಹೊಸ ಮಾರ್ಗಸೂಚಿ ರೂಪಿಸಬೇಕಿದೆ ಎಂದು ಅವರು ಹೇಳಿದರು.
ರಾಟ್ ಕಿಟ್ ಖರೀದಿಸಿ :
ವ್ಯಕ್ತಿಯ ಸ್ಯಾಂಪಲ್ ಸ್ವೀಕರಿಸಿದ ಐದು ನಿಮಿಷಗಳಲ್ಲಿ ಫಲಿತಾಂಶ ಕೊಡುವ ರಾಟ್ ಕಿಟ್‌ಗಳನ್ನು ಎಷ್ಟು ಅಗತ್ಯವೋ ಅಷ್ಟೂ ಖರೀದಿ ಮಾಡಲು ಡಿಸಿಎಂ ಅವರು ಅಧಿಕಾರಿಗಳಿಗೆ ಸೂಚಿಸಿದರು. ಈ ಕಿಟ್‌ಗೆ ಐಸಿಎಂಆರ್ ಕೂಡ ಮಾನ್ಯತೆ ನೀಡಿದ್ದು, ರೋಗ ಲಕ್ಷಣಗಳಿದ್ದರೆ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಿದರು.
ಉಳಿದಂತೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ಕೋವಿಡ್ ವಾರಿಯರ್‌ಗಳು, ವೈದ್ಯರು, ನರ್ಸುಗಳಿಗೆ ಸೋಂಕು ತಗುಲುತ್ತಿದ್ದು, ಆಯಾ ಜಿಲ್ಲೆಗಳ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಕೋವಿಡ್ ಕರ್ತವ್ಯಕ್ಕೆ ತಕ್ಷಣವೇ ನಿಯೋಜಿಸುವಂತೆ ಉಪ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು. ಜತೆಗೆ, ವೈದ್ಯಕೀಯ ಸಿಬ್ಬಂದಿ ಬಳಕೆ ಮಾಡುವ ವಸ್ತುಗಳ ಕೊರತೆಯಾಗಬಾರದು. ಮಾಸ್ಕ್, ಪಿಪಿಇ ಕಿಟ್, ಸ್ಯಾನಿಟೈಸರ್ ಇತ್ಯಾದಿಗಳು ಅಗತ್ಯ ಪ್ರಮಾಣದಲ್ಲಿ ಸದಾ ಲಭ್ಯ ಇರಬೇಕು ಎಂದು ಡಿಸಿಎಂ ಸೂಚಿಸಿದರು.