ಬೆಂಗಳೂರು: ಉದ್ಯಮಶೀಲತೆ ಹಾಗೂ ಸೃಜನಶೀಲತೆಗೆ ಹೆಸರಾದ ಕೇರಳವು ಇತರೆ ರಾಜ್ಯಗಳಿಗೆ ಹೋಲಿಸಿದರೆ ಅನೇಕ ಕ್ಷೇತ್ರಗಳಲ್ಲಿ ಸಾಕಷ್ಟು ಹಿಂದೆಬಿದ್ದಿದೆ. ಇದಕ್ಕೆ ಈವರೆಗೂ ಆಡಳಿತ ನಡೆಸಿದ ಎಲ್‌ಡಿಎಫ್-ಯುಡಿಎಫ್ ಒಕ್ಕೂಟಗಳ ದುರಾಡಳಿತವೇ ಕಾರಣ ಎಂದು ಕೇರಳ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿರುವ ಕೇರಳದ ಸಮಾನ ಮನಸ್ಕರ ಜತೆ ಸಂವಾದದಲ್ಲಿ ಮಾತನಾಡಿದ ಅವರು, ಸುಂದರ ಕರಾವಳಿ ಹಾಗೂ ಸಮೃದ್ಧ ಪ್ರಾಕೃತಿಕ ಸಂಪತ್ತು ಇದ್ದರೂ ರಾಜ್ಯವನ್ನು ಅಭಿವೃದ್ಧಿಯಲ್ಲಿ ಹಿಂದೆ ಬೀಳುವಂತೆ ಮಾಡಲಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಎಲ್‌ಡಿಎಫ್ ಮತ್ತು ಯುಡಿಎಫ್ ಕೂಟಗಳು ವಿಫಲವಾಗಿವೆ ಎಂದರು.
ರಾಜಕೀಯಕ್ಕೆ ಮಾತ್ರ ಸೀಮಿತ
ರಾಜ್ಯದ ಜನತೆಯ ನಿರೀಕ್ಷೆಗಳೇನು? ಇತರೆ ರಾಜ್ಯಗಳು ಯಾವ ರೀತಿಯಲ್ಲಿ ಮುನ್ನಡೆ ಸಾಧಿಸುತ್ತಿವೆ, ಅಕ್ಕಪಕ್ಕದ ರಾಜ್ಯಗಳಲ್ಲಿ ಪ್ರಗತಿ ಯಾವ ವೇಗದಲ್ಲಿ ಸಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಎಲ್‌ಡಿಎಫ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಯಾಕೆಂದರೆ, ಎಡಪಕ್ಷಗಳಿಗೆ ಯಾವುದೇ ಅಭಿವೃದ್ಧಿಯ ದೂರದೃಷ್ಟಿ ಇಲ್ಲ. ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾಗಿ ರಾಜ್ಯವನ್ನು ಮತ್ತಷ್ಟು ಹಿಂದಕ್ಕೆ ತಳ್ಳುತ್ತಿವೆ ಎಂದು ಡಾ. ಅಶ್ವತ್ಥನಾರಾಯಣ ದೂರಿದರು.
ಕಳೆದ 73 ವರ್ಷಗಳಿಂದ ಕೇರಳದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಎಡಪಕ್ಷಗಳು ಅಭಿವೃದ್ಧಿಯನ್ನು ಕಡೆಗಣಿಸಿವೆ. ಒಂದಾದ ಮೇಲೆ ಒಂದರಂತೆ ರಾಜ್ಯವನ್ನು ಇಷ್ಟ ಬಂದಂತೆ ಆಳಿದ ಈ ಪಕ್ಷಗಳು ಜನರ ನಂಬಿಕೆ, ನಿರೀಕ್ಷೆಗಳಿಗೆ ವಿರುದ್ಧವಾಗಿ ಕೆಲಸ ಮಾಡಿದವು ಎಂದು ಡಿಸಿಎಂ ಟೀಕಿಸಿದರು.
ಉದ್ಯೋಗ ಸೃಷ್ಟಿಯಲ್ಲಿ ಹಿಂದೆ
ರಾಜ್ಯದ ಜಿಡಿಪಿ ಎಷ್ಟು? ಕೈಗಾರಿಕೆಗಳು ಎಷ್ಟು ಬಂದಿವೆ? ಉತ್ಪಾದನೆ- ಉದ್ಯೋಗವೆಷ್ಟು? ಎಂಬ ವಿಷಯಗಳ ಬಗ್ಗೆ ಎಲ್‌ಡಿಎಫ್ ಸರ್ಕಾರ ಮಾತನಾಡುತ್ತಿಲ್ಲ. ತ್ರಿಪುರಾ, ಪಶ್ಚಿಮ ಬಂಗಾಳ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಎಡಪಕ್ಷಗಳನ್ನು ಜನರು ತಿರಸ್ಕರಿಸಿದ್ದಾರೆ. ಕೇರಳದಲ್ಲೂ ಈ ಚುನಾವಣೆಯಲ್ಲಿ ಜನರು ಅದೇ ಕೆಲಸ ಮಾಡಲಿದ್ದಾರೆ. ದೇವರನಾಡಿನಲ್ಲಿ ಈ ಸಲ ಹೊಸಗಾಳಿ ಬೀಸುತ್ತಿದ್ದು, ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ ಎಂದು ಅವರು ಹೇಳಿದರು.
ಕೇರಳದಲ್ಲಿರುವ ಹೊಸ ತಲೆಮಾರಿನ ಯುವಜನರು ಈಗ ಬದಲಾವಣೆ ಬಯಸುತ್ತಿದ್ದಾರೆ. ಅವರಿಗೆ ಗೊತ್ತಿದೆ, ಕಳೆದ ಏಳು ದಶಕಗಳಲ್ಲಿ ಕೇರಳದಲ್ಲಿ ಪ್ರಗತಿ ಆಗಿಲ್ಲ ಎಂದು. ಉದ್ಯೋಗ ಸೃಷ್ಟಿಯಲ್ಲಿ ಇಡೀ ದೇಶದಲ್ಲಿಯೇ ಕೇರಳ ಹಿಂದೆ ಬಿದ್ದಿದೆ. ಇನ್ನು ರಾಜಕೀಯವಾಗಿಯೂ ಎಡಪಕ್ಷಗಳಿಗೆ ಹಾಗೂ ಕಾಂಗ್ರೆಸ್‌ಗೆ ಉತ್ತಮ ನಾಯಕತ್ವ ಇಲ್ಲ. ಬಿಜೆಪಿ ಬಲಿಷ್ಠ ನಾಯಕತ್ವ ಹೊಂದಿರುವ ಸಶಕ್ತ ಪಕ್ಷ. ದೇಶವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಶಕ್ತಿ ಬಿಜೆಪಿಗೆ ಮಾತ್ರ ಇದೆ. ಇಂಥ ಸಂದರ್ಭದಲ್ಲಿ ಹೊಸ ಆಲೋಚನೆಗಳುಳ್ಳ ಬಿಜೆಪಿಗೆ ಅವಕಾಶ ಕೊಟ್ಟು ಎಲ್‌ಡಿಎಫ್-ಯುಡಿಎಫ್ ಕೂಟಗಳನ್ನು ತಿರಸ್ಕರಿಸಬೇಕು ಎಂದು ಡಿಸಿಎಂ ಮನವಿ ಮಾಡಿದರು.
ಪ್ರಗತಿಗೆ ಬಿಜೆಪಿ ಮಾತ್ರ ಆಯ್ಕೆ ಮತ್ತು ಪರಿಹಾರ
ಕೇರಳದಲ್ಲಿ ರಾಜಕಾರಣ ನಿಂತ ನೀರಾಗಿದೆ. ಹೊಸತನ, ದೂರದೃಷ್ಟಿ ಇಲ್ಲದ ರಾಜಕೀಯ ವ್ಯವಸ್ಥೆ ಅಲ್ಲಿದೆ. ಅಲ್ಲೊಂದು ಹೊಸ ಪಕ್ಷ ಆಡಳಿತಕ್ಕೆ ಬರದೇ ಹೋದರೆ ಕೇರಳ ಮತ್ತೆ ಹಿಂದಕ್ಕೆ ಹೋಗುತ್ತದೆ ಎಂದು ಎಚ್ಚರಿಸಿದ ಅವರು, ಗೆದ್ದೆವು, ಸರಕಾರ ಮಾಡಿದೆವು ಎಂಬುದಷ್ಟೇ ಸಾಲದು. ಗುಣಾತ್ಮಕವಾದ ಬದಲಾವಣೆ ತರಬೇಕು. ಅಪಾಯದ ವಿರುದ್ಧ ಈಜಿ ಸುಧಾರಣೆಗಳನ್ನು ಕೈಗೊಳ್ಳಬೇಕು. ಸವಾಲುಗಳನ್ನು ಗೆಲ್ಲಬೇಕು. ಕೇರಳದ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ. ಅದೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ಬಿಜೆಪಿಗೆ ಅವಕಾಶ ಕೊಡಬೇಕು. ಪ್ರಗತಿ ಎಂದರೆ ಬಿಜೆಪಿ ಮಾತ್ರ ಆಯ್ಕೆ, ಪರಿಹಾರವೂ ಹೌದು. ಕೌಟುಂಬಿಕ, ಅನುವಂಶೀಯ ಆಡಳಿತಕ್ಕೆ ನಮ್ಮ ಪಕ್ಷದಲ್ಲಿ ಅವಕಾಶವೇ ಇಲ್ಲದ ಏಕೈಕ ಪಕ್ಷ ಬಿಜೆಪಿ ಎಂದು ಉಪ ಮುಖ್ಯಮಂತ್ರಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಬೆಂಗಳೂರು ನಗರವನ್ನು ಗಮನಿಸಿ
ಬಿಜೆಪಿ ಸರಕಾರ ಬಂದ ಮೇಲೆ ಬೆಂಗಳೂರು ಯಾವ ದಿಕ್ಕಿನಲ್ಲಿ ಪ್ರಗತಿ ಹೊಂದುತ್ತಿದೆ ಎಂಬುದನ್ನು ತಾವು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಸರಕಾರ ಬರುವ ತನಕ ಮಹಾರಾಜರ ರೀತಿಯ ಆಳ್ವಿಕೆ ಇತ್ತು. ಆದರೆ ನಮ್ಮ ಪಕ್ಷ ಬಂದ ಮೇಲೆ ಅದೆಲ್ಲವನ್ನೂ ತೊಡೆದು ಹಾಕಲಾಯಿತು. ಸಕಾರಾತ್ಮಕ ಚಿಂತನೆ, ಗುಣಾತ್ಮಕ ಬದಲಾವಣೆ ಮಾತ್ರ ನಮ್ಮ ಅಜೆಂಡಾ ಆಗಿತ್ತು. ಹೀಗಾಗಿ ಬೆಂಗಳೂರು ಮತ್ತಷ್ಟು ಹುರುಪಿನಿಂದ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಇರುವ ಕೇರಳ ಮೂಲದ ಪ್ರಮುಖರಾದ ಗೋಪಿನಾಥನ್, ರಾಜಾಗೋಪಾಲ, ಸುದೀಶ್, ರೇಜಿಕುಮಾರ್, ಸ್ಯಾನ್ ಫಿಲಿಪ್ಸ್, ಅನೀಸ್ ಅಂಥೋಣಿ ಮತ್ತಿತರರು ಹಾಜರಿದ್ದರು.