ಬೆಂಗಳೂರು : ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿ ಕೃಷಿ ಭೂಮಿಯಲ್ಲಿ ಕಟ್ಟಡ ನಿರ್ಮಾಣ ಮಾಡುವುದನ್ನು ತಡೆಯುವ ಅಧಿಕಾರ ಜಿಲ್ಲಾಧಿಕಾರಿಗೆ ಇಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕಟ್ಟಡ ನಿರ್ಮಿಸುತ್ತಿರುವ ಜಾಗ ತಮ್ಮದು ಹಾಗೂ ಅದು ಕೃಷಿ ಭೂಮಿಯಾಗಿದೆ. ಅಲ್ಲಿ ಕಟ್ಟಡ ನಿರ್ಮಾಣ ಮಾಡದಂತೆ ಜಿಲ್ಲಾಧಿಕಾರಿಗೆ ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರಿನ ಚಲ್ಲಘಟ್ಟ ನಿವಾಸಿ ಲಕ್ಷಣರೆಡ್ಡಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರರು ತಮಗೆ ಸೇರಿದ ಕೃಷಿ ಭೂಮಿಯಲ್ಲಿ ಕೆಲ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅದನ್ನು ತಡೆಗಟ್ಟಲು ಜಿಲ್ಲಾಧಿಕಾರಿಗೆ ನಿರ್ದೇಶಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಆದರೆ, ಅರ್ಜಿದಾರರು ಇದೇ ವಿಚಾರವಾಗಿ ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಅಲ್ಲಿ ತಡೆಯಾಜ್ಞೆ ಕೋರಿಕೆ ತಿರಸ್ಕೃತಗೊಂಡಿದೆ. ಈ ವಿಚಾರವನ್ನು ಮುಚ್ಚಿಟ್ಟು ಜಿಲ್ಲಾಧಿಕಾರಿಗೆ ನಿರ್ದೇಶನ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಇದು ನ್ಯಾಯಾಂಗ ಪ್ರಕ್ರಿಯೆಯ ಸ್ಪಷ್ಟ ದುರ್ಬಳಕೆ ಎಂದಿದೆ.
ಅಲ್ಲದೇ, ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 95(2)ರ ನಿಯಮದಂತೆ ಜಿಲ್ಲಾಧಿಕಾರಿಯು ಕೃಷಿ ಭೂಮಿಯಲ್ಲಿ ಕಟ್ಟಡ ನಿರ್ಮಾಣ ಮಾಡದಂತೆ ತಡೆಗಟ್ಟುವ ಅಧಿಕಾರ ಹೊಂದಿದ್ದು, ಅದನ್ನು ಚಲಾಯಿಸಲು ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
ಆದರೆ, ಕಾಯ್ದೆಯ ಸೆಕ್ಷನ್ 95(2)ರ ಪ್ರಕಾರ, ಕೃಷಿ ಭೂಮಿಯನ್ನು ಪರಿವರ್ತಿಸಲು ಕೋರಿ ಅರ್ಜಿ ಸಲ್ಲಿಸಿದಾಗ ಅದು ಪರಿವರ್ತನೆಗೆ ಯೋಗ್ಯವೇ ಅಥವಾ ಇಲ್ಲವೇ ಎಂಬ ಕುರಿತಂತೆ ಮಾತ್ರವೇ ಜಿಲ್ಲಾಧಿಕಾರಿ ನಿರ್ಣಯ ಕೈಗೊಂಡು ಇತ್ಯರ್ಥಪಡಿಸಬಹುದು.
ಕೃಷಿ ಭೂಮಿಯಲ್ಲಿ ಕಟ್ಟಡ ನಿರ್ಮಿಸುತ್ತಿರುವ ಕುರಿತಂತೆ ಕ್ರಮಕೈಗೊಳ್ಳಲಾಗದು. ಇಂತಹ ವ್ಯಾಜ್ಯವನ್ನು ಸಿವಿಲ್ ನ್ಯಾಯಾಲಯ ನಿರ್ಣಯಿಸಬಹುದೇ ಹೊರತು ಜಿಲ್ಲಾಧಿಕಾರಿಯಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ, ನ್ಯಾಯಾಲಯದ ಸಮಯ ಹಾಳು ಮಾಡಿದ್ದಕ್ಕೆ ಅರ್ಜಿದಾರರಿಗೆ 15 ಸಾವಿರ ದಂಡ ವಿಧಿಸಿದೆ.
ಪ್ರಕರಣದ ಹಿನ್ನೆಲೆ : ಬೆಂಗಳೂರಿನ ಯಲಹಂಕ ಸಮೀಪದ ಸಿಂಗನಾಯಕನಹಳ್ಳಿಯ ಸೈಟ್ ನಂಬರ್ 69/2ಸಿ4 ರಲ್ಲಿನ 3.1/4 ಗುಂಟೆ ಜಾಗದಲ್ಲಿ ಜಗನ್ನಾಥ್, ಜಯಮ್ಮ ಹಾಗೂ ಇತರರು ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ಪ್ರಶ್ನಿಸಿ ವರ್ತೂರಿನ ಲಕ್ಷ್ಮಣರೆಡ್ಡಿ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ 2017ರಲ್ಲಿ 3 ಬಾರಿ ದೂರು ನೀಡಿದ್ದರು.
ಬಳಿಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ದೂರುದಾರರು ಆಸ್ತಿ ತಮಗೆ ಸೇರಿದ್ದು, ಅದರಲ್ಲಿ ಆಸ್ತಿಯ ಒಡೆತನವೇ ಇಲ್ಲದ ಸಂಬಂಧಿಗಳು ಕಟ್ಟಡ ನಿರ್ಮಿಸುತ್ತಿದ್ದಾರೆ. ಜಾಗ ಕೃಷಿ ಭೂಮಿಯಾಗಿದೆ.
ಕೃಷಿ ಭೂಮಿಯಲ್ಲಿ ಕಟ್ಟಡ ನಿರ್ಮಿಸದಂತೆ ತಡೆಗಟ್ಟಲು ಜಿಲ್ಲಾಧಿಕಾರಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು. ಆದರೆ, ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಿದ್ದು, ಇಲ್ಲಿ ತಡೆಯಾಜ್ಞೆ ತಿರಸ್ಕೃತಗೊಂಡಿದ್ದನ್ನು ನ್ಯಾಯಾಲಯಕ್ಕೆ ಮರೆಮಾಚಿದ್ದರು.
ಓದಿ: ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿ ಸಾವು : ಸಬ್ ಇನ್ಸ್ಪೆಕ್ಟರ್ ಕೊಂದು, ವಾಹನಕ್ಕೆ ಬೆಂಕಿ ಹಚ್ಚಿದ್ರು!